ನಂದಿನಿ ಹಾಲು ಸಂಗ್ರಹದಲ್ಲಿ ದಾಖಲೆ: ಕೆ.ವೆಂಕಟೇಶ | One crore leters

k_venkatesh-three_four
Published on

ಬೆಂಗಳೂರು: ಹೈನು ಸಹಕಾರ ಚಳವಳಿಯನ್ನು ಬಲಪಡಿಸುವಲ್ಲಿ ಮುಂದಿರುವ ‘ನಂದಿನಿ’ ಬ್ರ್ಯಾಂಡ್ ಈ ಬಾರಿ ದಸರಾ ಮತ್ತು ದೀಪಾವಳಿಗೆ ಎರಡು ಹೊಸ ದಾಖಲೆಗಳನ್ನು ಸೃಷ್ಟಿಸಿದೆ.

ಕರ್ನಾಟಕ ಹಾಲು ಮಂಡಳಿ ಹೆಮ್ಮೆಯ ಉತ್ಪನ್ನವಾದ ‘ನಂದಿನಿ’ ಹಾಲು ಹೈನುಗಾರ ರೈತರಿಂದ ದಿನಕ್ಕೆ ಸರಾಸರಿ ಒಂದು ಕೋಟಿ ಲೀಟರ್ ಸಂಗ್ರಹವಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ ಮಾಹಿತಿ ನೀಡಿದರು.

ವಿಕಾಸಸೌಧದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್‌ನಲ್ಲಿ ಪ್ರತಿ ಲೀಟರ್ ಹಾಲಿಗೆ ನಾಲ್ಕು ರೂ. ಏರಿಕೆಯಾಗಿದೆ. ಸರ್ಕಾರದ ಆದೇಶದಂತೆ 16 ಹಾಲು ಒಕ್ಕೂಟಗಳು ಹೆಚ್ಚಳವಾದ ನಾಲ್ಕು ರೂ.ಗಳನ್ನು ಹೈನುಗಾರ ರೈತರಿಗೆ ನೀಡುತ್ತಿವೆ.

ಇದರಿಂದಾಗಿ ಪ್ರತಿದಿನ ಹಾಲು ಸಂಗ್ರಹದಲ್ಲಿ ದಾಖಲೆ ಸೃಷ್ಟಿಯಾಗಿದೆ. ಈ ಪೈಕಿ 65 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಯುಎಚ್‌ಟಿ ಹಾಲು ಉತ್ಪನ್ನಗಳು ರೂಪದಲ್ಲಿ ಮಾರಾಟವಾಗುತ್ತಿದೆ ಎಂದು ತಿಳಿಸಿದರು.

ದೇಶ, ವಿದೇಶದಲ್ಲಿ ಮಾರಾಟ

ರಾಜ್ಯದ ಜತೆಗೆ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ, ದೆಹಲಿ ಅಸ್ಸಾಂ ಜತೆಗೆ ದುಬೈ, ಸಿಂಗಾಪುರ ದೇಶಗಳ ಮಾರುಕಟ್ಟೆಯಲ್ಲಿ ನಂದಿನಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದರು.

ಹಾಲು, ಮೊಸರು, ಯುಎಚ್‌ಟಿ ಹಾಲು ರೂಪದಲ್ಲಿ 65 ಲೀಟರ್ ಮಾರಾಟವಾದ ಬಾಕಿ 35 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಪುಡಿಯಾಗಿ ಪರಿವರ್ತನೆಯಾಗುತ್ತದೆ. ‘ನಂದಿನಿ ಬ್ರ್ಯಾಂಡ್’ನಲ್ಲಿ ಹಾಲು, ಮೊಸರು, ಬೆಣ್ಣೆ, ತುಪ್ಪ, ಪನೀರ್, ಹಾಲಿನ ಪುಡಿ, ಪಾನೀಯಗಳು, ಸಿಹಿ ತಿನಿಸುಗಳು ಸೇರಿ 175ಕ್ಕೂ ಹೆಚ್ಚು ಉತ್ಪನ್ನಗಳು ಪರಿಶುದ್ಧತೆ, ಗುಣಮಟ್ಟ, ರುಚಿಯಿಂದ ಗ್ರಾಹಕರಿಗೆ ಇಷ್ಟವಾಗಿವೆ ಎಂದು ಸಚಿವ ಕೆ.ವೆಂಕಟೇಶ ವಿವರಿಸಿದರು.

1100 ಟನ್ ಸಿಹಿ ಉತ್ಪನ್ನಗಳ ವಹಿವಾಟು

ಈ ವರ್ಷ ಕೆಎಂಎ್ ಹಾಗೂ ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1100 ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿದ್ದು, ಒಟ್ಟಾರೆ 45 ಕೋಟಿ ರೂ.ಗಳ ದಾಖಲೆಯ ವಹಿವಾಟು ಆಗಿದ್ದು, ಕೆಎಂಎ್ ಇತಿಹಾಸದಲ್ಲಿಯೇ ಸಾರ್ವಕಾಲಿಕ ದಾಖಲೆಯಾಗಿದೆ ಎಂದರು.

ಹಾಲು ಒಕ್ಕೂಟಗಳು ಲೀಟರ್ ಹಾಲಿಗೆ 10 ರೂ ಹೆಚ್ಚಳಕ್ಕೆ ಬೇಡಿಕೆಯಿಟ್ಟಿದ್ದವು. ಆದರೆ ಸರ್ಕಾರ ನಾಲ್ಕು ರೂ.ಗೆ ಹೆಚ್ಚಿಸಲು ಒಪ್ಪಿ, ಅದನ್ನು ರೈತರಿಗೆ ವರ್ಗಾಯಿಸಲು ಸೂಚಿಸಿತ್ತು. ಈಗಲೂ ಹಾಲು ಒಕ್ಕೂಟಗಳು ಹಾಲು ದರ ಹೆಚ್ಚಳದ ಬೇಡಿಕೆಯಿಟ್ಟಿದ್ದು, ಆ ಬಗ್ಗೆ ಸರ್ಕಾರ ಯಾವುದೇ ಯೋಚನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಹೈನುಗಾರ ರೈತರಿಗೆ ಜೂನ್ ತನಕ ಪ್ರೋತ್ಸಾಹಧನ ಪಾವತಿಸಲಾಗಿದೆ. 15 ಹಾಲು ಒಕ್ಕೂಟಗಳಿಗೆ ಅಧ್ಯಕ್ಷರ ಚುನಾವಣೆಯಾಗಿದೆ. ಚಿಕ್ಕಬಳ್ಳಾಪುರ ಒಕ್ಕೂಟದ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆದಿದೆ. ಇದಾದ ನಂತರ ಕೆಎಂಎ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಸಚಿವ ಕೆ.ವೆಂಕಟೇಶ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಎಂಎ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ, ಆಡಳಿತಾಧಿಕಾರಿ ಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net