

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದಾದರೂ ನಂದಿ ಗಿರಿಧಾಮದಲ್ಲಿ ಮುಂದುವರೆದಿರುವ ನಿರ್ಬಂಧವನ್ನು ತೆರವುಗೊಳಿಸುವ ನಿರೀಕ್ಷೆ ಮೂಡಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣದಲ್ಲಿ ಕೈಗೊಂಡಿರುವ ಆನ್‌ಲೈನ್ ಸಿಸ್ಟಂ, ಪಾರ್ಕಿಂಗ್ ವ್ಯವಸ್ಥೆ ಸುಧಾರಣೆಯ ಕೆಲಸ ಮುಗಿಸಿ, ಇನ್ನು ಎರಡು ವಾರದೊಳಗೆ ಮುಕ್ತ ಪ್ರವೇಶ ನೀಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರ್ನಾಟಕದ ಊಟಿ ಎಂತಲೇ ಕರೆಸಿಕೊಂಡಿರುವ ವಿಶ್ವವಿಖ್ಯಾತ ನಂದಿಗಿರಿಧಾಮವು ದೇಶ ವಿದೇಶಗಳ ಜನರನ್ನು ಆಕರ್ಷಿಸುತ್ತಿದೆ.
ಸಾಮಾನ್ಯ ದಿನಗಳಲ್ಲಿ 6ರಿಂದ 7 ಸಾವಿರ ಮಂದಿ, ಹಬ್ಬ, ರಜೆ ಮತ್ತು ವಾರಂತ್ಯ ದಿನ ಸೇರಿ ವಿಶೇಷ ದಿನ 12 ಸಾವಿರ ಮಂದಿ ಆಗಮಿಸುತ್ತಾರೆ. ಕರೊನಾ ಲಾಕ್‌ಡೌನ್ ಘೋಷಣೆಯಾದಾಗಿನಿಂದಲೂ ಬಹುತೇಕ ಪ್ರವಾಸಿ ತಾಣಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಸಹಜವಾಗಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಗಿರಿಧಾಮದ ತಪ್ಪಲಿನಲ್ಲಿನ ಹೋಟೆಲ್, ರೆಸಾರ್ಟ್, ವಿಲ್ಲಾ, ತಿಂಡಿ ತಿನಿಸು ಅಂಗಡಿ ಮಾಲೀಕರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ, ನಿರ್ಬಂಧ ತೆರವುಗೊಳಿಸಲು ಆಗ್ರಹಿಸಿದ್ದಾರೆ. ಇದಕ್ಕೆ ಆದಷ್ಟು ಬೇಗ ಆನ್‌ಲೈನ್ ಸಿಸ್ಟಂ ವ್ಯವಸ್ಥೆ ಸರಿಪಡಿಸಿ, ಪ್ರವಾಸಿಗರ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಲು ಚಿಂತಿಸಲಾಗಿದೆ.
ನಂದಿ ಗಿರಿಧಾಮದಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧ ಮುಂದುವರೆಸಿರುವುದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಜನರು ಮತ್ತು ವಾಣಿಜ್ಯಾತ್ಮಕ ಲಾಭದ ದೃಷ್ಟಿಯಿಂದ ಆದಷ್ಟು ಬೇಗ ತೆರವುಗೊಳಿಸಲಾಗುವುದು. ಆನಂದ್ ಸಿಂಗ್, ಪ್ರವಾಸೋದ್ಯಮ ಇಲಾಖೆ ಸಚಿವ