

ಚಿತ್ರದುರ್ಗ: ಮುರುಘಾಮಠದ 7ನೇ ಪೀಠಾಧಿಪತಿಯಾಗಿದ್ದ ಶ್ರೀ ಮೂರು ಸಾವಿರದ ಸಿದ್ಧಲಿಂಗ ಮುರುಘ ರಾಜೇಂದ್ರ ಸ್ವಾಮೀಜಿ ಅವರು ಸ ಮಾಜ ಶುದ್ಧಿಗಾಗಿ ಧರ್ಮಶಕ್ತಿ, ತತ್ವಬೋಧನೆ ಮತ್ತು ಸಮರ್ಪಣಾ ಭಾವದಿಂದ ಸಮಾಜಸೇವೆ, ಸುಧಾರಣೆ ಮಾಡಿದ್ದರು ಎಂದು ನಗರದ ಎಸ್‌ಜೆಎಂ ಪದವಿ ಕಾಲೇಜಿನ ಅಧ್ಯಾಪಕ ಸಿ.ಎಂ. ವಿಶ್ವನಾಥ್ ಹೇಳಿದರು.
ಶ್ರೀಮಠದಲ್ಲಿ ಶನಿವಾರ ಶ್ರಾವಣ ಮಾಸದ 9ನೇ ದಿನದ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಶ್ರೀಗಳ ಕುರಿತು ವಿಷಯಾವಲೋಕನ ಮಾಡಿದ ಅವರು, ಸಿದ್ಧಲಿಂಗ ಶ್ರೀಗಳು 1779ರಿಂದ 1790 ರವರೆಗೆ ಶೂನ್ಯಪೀಠದ ಧೈರ್ಯವಂತ ಗುರುಗಳಾಗಿದ್ದರು. ವಾಮಾಚಾರದ ವಿರುದ್ಧ ಧರ್ಮಯುದ್ಧವನ್ನೇ ಆರಂಭಿಸಿದ್ದರು ಎಂದರು.
ಸಮ್ಮುಖ ವಹಿಸಿದ್ಧ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಸಿದ್ಧಲಿಂಗ ಶ್ರೀಗಳ ಕಾಲದಲ್ಲಿ ಗುರುಪೀಠ, ವಿರಕ್ತಪೀಠ, ಶೂನ್ಯಪೀಠ, ನ್ಯಾಯಪೀಠವೂ ಆಗಿ ಶ್ರೀಮಠ ಕಾರ್ಯನಿರ್ವಹಿಸಿದೆ ಎಂದರು.
ಸಾನಿಧ್ಯ ವಹಿಸಿದ್ದ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವ ಕುಮಾರ ಸ್ವಾಮೀಜಿ ಮಾತನಾಡಿ, ಶ್ರೀಗಳು ದಾರಿ ತಪ್ಪಿ ನಡೆಯುತ್ತಿದ್ದವರಿಗೆ ಬುದ್ಧಿ ಹೇಳುವುದರೊಂದಿಗೆ ಸಮಾಜವನ್ನು ಶುದ್ಧೀಕರಣ ಮಾಡುವುದರೊಂದಿಗೆ ನಾಡಿನ ಬೆಳವಣಿಗೆಗೆ ಕಾರಣರಾಗಿದ್ದರೆ ಎಂದು ತಿಳಿಸಿದರು.
ಗಂಗಾಂಭಿಕಾ, ಶಂಕರ್, ಮಠದ ಕುರುಬರಹಟ್ಟಿ ಶಿವಯೋಗಿ ಕುಟುಂಬ, ವಚನ ಕಮ್ಮಟದ ನಿರ್ದೇಶಕ ವೀರಭದ್ರಪ್ಪ, ಚಲ್ಮೇಶ್ ಇತರರು ಇದ್ದರು. ಶಿಕ್ಷಕ ಬಸನಗೌಡ ಸ್ವಾಗತಿಸಿ, ಶಿಕ್ಷಕ ನಾಗನಾಯಕ್ ನಿರೂಪಿಸಿದರು.
ಇಂದಿನ ಕಾರ‌್ಯಕ್ರಮ: ಶ್ರೀಮಠದಲ್ಲಿ ಆ.3 ರಂದು ಬೆಳಗ್ಗೆ 8ಕ್ಕೆ ಮೂರು ಸಾವಿರದ ಶ್ರೀಒಪ್ಪತ್ತಿನ ಚೆನ್ನವೀರ ಸ್ವಾಮೀಜಿ ಸ್ಮರಣೆ ಕಾರ‌್ಯಕ್ರಮವಿದೆ. ನಗರದ ಎಸ್‌ಜೆಎಂ ಐಟಿಐ ಕಾಲೇಜು ಪ್ರಾಚಾರ್ಯ ಬೋರೇಶ್ ವಿಷಯಾವಲೋಕನ ಮಾಡುವರು.