

ಧಾವಂತ ಮತ್ತು ಊಹಾಪೋಹದ ಪತ್ರಿಕೋದ್ಯಮಕ್ಕೆ ಭವಿಷ್ಯ ಇಲ್ಲ. ಆದರೆ, ವೃತ್ತಿಪರ ಸತ್ಯ, ನಿಷ್ಠೆಯುಳ್ಳ ಪತ್ರಿಕೋದ್ಯಮಕ್ಕೆ ಭವಿಷ್ಯ ಉಜ್ವಲವಾಗಿದೆ. ಸತ್ಯನಿಷ್ಠೆಯ ಪತ್ರಿಕೋದ್ಯಮಕ್ಕೆ ಸಂದರ್ಭ ಹದವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಮಾಧ್ಯಮ ಅಕಾಡೆಮಿ, ಮೈವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಸಹಯೋಗದಲ್ಲಿ ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ‘ಏನ್ ಸಮಾಚಾರ..!’ ಮೀಡಿಯಾ ಹಬ್ಬದ ಸಮಾರೋಪ ಸಮಾರಂಭದಲ್ಲಿ ಶುಕ್ರವಾರ ಮಾತನಾಡಿ, ಪತ್ರಿಕೋದ್ಯಮ ಸತ್ಯ, ನಿಷ್ಠೆ ಹಾಗೂ ವಸ್ತುನಿಷ್ಠವಾಗಿ ನಡೆಯುತ್ತಿದೆ ಎಂದರು.
ಪತ್ರಿಕೋದ್ಯಮದ ಆದ್ಯತೆ ಸತ್ಯನಿಷ್ಠೆಯಿಂದ ಪಕ್ಷನಿಷ್ಠೆಗೆ ಜಾರಿ ಈಗ ವ್ಯಕ್ತಿನಿಷ್ಠೆ ಕಡೆಗೆ ಜಾರುತ್ತಿದೆ. ಹೀಗಾಗಿ, ವೃತ್ತಿ ನೈತಿಕತೆ ಮತ್ತು ತಂತ್ರಜ್ಞಾನದ ಸವಾಲುಗಳನ್ನು ಜೀರ್ಣಿಸಿಕೊಂಡು ವೃತ್ತಿಪರತೆ ರೂಪಿಸಲು ಮಾಧ್ಯಮ ಅಕಾಡೆಮಿಯಿಂದ ಕಾರ್ಯಾಗಾರ ನಡೆಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ಪತ್ರಿಕೋದ್ಯಮದ ಕೌಶಲ, ತಂತ್ರಜ್ಞಾನ ಎಲ್ಲವನ್ನು ಕಲಿಯುವ ಜತೆಗೆ ಹೊಣೆಗಾರಿಕೆಯನ್ನೂ ಅರಿತುಕೊಳ್ಳುವುದು ಅಗತ್ಯ. ಈ ಹಿಂದೆ ಪತ್ರಿಕೋದ್ಯಮ ಎಂಬುದು ಸೇವೆಯಾಗಿತ್ತು. ಆದರೆ, ಇಂದು ಉದ್ಯಮವಾಗಿದೆ. ಹಿಂದೆ ವಸ್ತುನಿಷ್ಠತೆ ಪತ್ರಿಕೋದ್ಯಮದ ಜೀವ ಸೆಲೆಯಾಗಿತ್ತು. ಆದರೆ ಇಂದು ವ್ಯಕ್ತಿನಿಷ್ಠತೆ ಪಿಡುಗು ಆತಂಕಕಾರಿಯಾಗಿ ಬೆಳೆಯುತ್ತಿದೆ ಆತಂಕ ವ್ಯಕ್ತಪಡಿಸಿದರು.
ಸುಳ್ಳು ಸುದ್ದಿ ಯಾವುದು, ನಿಜವಾದ ಸುದ್ದಿ ಯಾವುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನಮಗೆ ಸಮಯಬೇಕಾಗಿದೆ. ಅದಕ್ಕಾಗಿ ನಮ್ಮ ಸರ್ಕಾರ ಫ್ಯಾಕ್ಟೃ್ ಚೆಕ್ ಎಂಬ ತಂಡವನ್ನು ನೇಮಕ ಮಾಡಿದೆ. ಪತ್ರಕರ್ತರಲ್ಲಿ ಫ್ಯಾಕ್ಟೃ್ ಚೆಕ್ ಮಾಡುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಮಾಹಿತಿ ಆಯೋಗದ ಆಯುಕ್ತ ಬದ್ರುದ್ದೀನ್ ಮಾತನಾಡಿ, ಒಳ್ಳೆಯ, ಯಶಸ್ವಿ ಪತ್ರಕರ್ತರಾಗಬೇಕೆಂದರೆ ಮಾತೃ ಹೃದಯವಿರಬೇಕು. ಕೇಳುವಂತಹ ತಾಳ್ಮೆ, ಸಹನೆ ಮೊದಲು ಇರಬೇಕು. ಮಾಧ್ಯಮ ಕ್ಷೇತ್ರಕ್ಕೆ ಬಂದಮೇಲೆ ಬಹಳ ಜವಾಬ್ದಾರಿ ಇರುವುದರಿಂದ ತಾಳ್ಮೆ, ಸಹನೆ ಎಂಬುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದರು.
ಪತ್ರಕರ್ತರಾದ ಮೇಲೆ ನಮಗೆ ಅನೇಕರು ಪರಿಚಯವಾಗುತ್ತಾರೆ. ಅದನ್ನೆಲ್ಲ ಬಿಟ್ಟು ನಾನು ನನ್ನ ವೃತ್ತಿಗೆ ಗೌರವ ಸೂಚಿಸುತ್ತೇನೆ ಎಂಬ ಕನಿಷ್ಠ ಮನೋಭಾವನೆಯಾದರೂ ಇರಬೇಕು. ಈ ಕ್ಷೇತ್ರದಲ್ಲಿ ಇರಬೇಕೆಂದರೆ ಅಧ್ಯಯನ ಅಗತ್ಯ. ಅಧ್ಯಯನಶೀಲತೆಯೇ ಯಶಸ್ಸಿನ ಮೊದಲ ಗುಟ್ಟು ಎಂದು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ. ನಿರಂಜನ್ ವಾನಳ್ಳಿ ಮಾತನಾಡಿ, ನಾವು ತರಗತಿಯಲ್ಲಿ ಕುಳಿತು ಪಾಠ ಕಲಿತುಕೊಂಡು ಹೋದರೆ, ಯಾರೂ ನಮಗೆ ಕೆಲಸ ಕೊಡುವುದಿಲ್ಲ. ಮಾಧ್ಯಮ ಎಂಬುದು ತುಂಬಾ ಬದಲಾವಣೆಯಾಗುವುದರ ಜತೆಗೆ ಮಾಧ್ಯಮ ಶಿಕ್ಷಣ ಕೂಡ ಬದಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಏನಿದೆ ಅದನ್ನೇ ಸಾಮಾಜಿಕ ಮಾಧ್ಯಮದಿಂದ ಹಿಡಿದು ಟೆಲಿವಿಷನ್ ಮಾಧ್ಯಮದವರೆಗೂ ಹೇಳುವಂತಹ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭ ಮಾಧ್ಯಮ ಹಬ್ಬದಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯುಷ ಖಾನಂ, ಹಿರಿಯ ಪತ್ರಕರ್ತರಾದ ರಾಧಾ ಹಿರೇಗೌಡರ್, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ.ಎನ್. ಮಮತಾ ಇತರರು ಇದ್ದರು.