ಧಾರಾಕಾರ ಮಳೆ, ಮನೆಗೆ ನುಗ್ಗಿದ ನೀರು

111
Published on

ಎಂ.ಕೆ.ಹುಬ್ಬಳ್ಳಿ: ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಗೆ ಪಟ್ಟಣದ ಬಳಿಯ ಬೈಲಹೊಂಗಲ ರಸ್ತೆ ಪಕ್ಕದ ರಾಜ ಕಾಲುವೆ ತುಂಬಿ ಹರಿದಿದ್ದು, ಚನ್ನಮ್ಮ ನಗರದ ರಾಕೇಶ ಅಪ್ಪುಗೋಳ ಎಂಬುವರ ಮೂರು ಮನೆಗಳಿಗೆ ಕೊಳಚೆ ನೀರು ನುಗ್ಗಿದೆ.

ಪ್ರವಾಹದಂತೆ ನುಗ್ಗಿದ ನೀರಿನಿಂದ ಚನ್ನಮ್ಮ ನಗರ ಸಂಪೂರ್ಣ ಜಲಾವೃತಗೊಂಡು ಅಪ್ಪುಗೋಳ ಎಂಬುವವರ ಮನೆಯಲ್ಲಿದ್ದ ದವಸ-ಧಾನ್ಯ, ಗೃಹೋಪಯೋಗಿ ವಸ್ತುಗಳು
ಹಾಳಾಗಿದ್ದು, ನಷ್ಟ ಸಂಭವಿಸಿದೆ. ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದ್ದರಿಂದ ಮತ್ತು ಇರುವ ಚರಂಡಿ ಸ್ವಚ್ಛಗೊಳಿಸದ್ದರಿಂದ ಪಪಂ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾನಿಗೊಂಡ ಮನೆ ಮತ್ತು ನಷ್ಟಕ್ಕೆ ಪರಿಹಾರ ಒದಗಿಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳದಿದ್ದರೆ ಪಪಂ ಎದುರು ಪ್ರತಿಭಟನೆ ನಡೆಸುವುದಾಗಿ ಜನರು ಎಚ್ಚರಿಸಿದ್ದಾರೆ.

ಮಳೆ ಹೊಡೆತಕ್ಕೆ ಪಟ್ಟಣದ ಹಲವು ಪ್ರದೇಶಗಳಲ್ಲೂ ನೀರು ನುಗ್ಗಿದ ಮಾಹಿತಿ ಲಭ್ಯವಾಗಿದ್ದು, ಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net