

ಬೇಲೂರು: ಬೇಲೂರು ಟೌನ್ ಸಹಕಾರ ಸಂಘದ ಅಧ್ಯಕ್ಷರಾಗಿ ಪುರಸಭೆ ಮಾಜಿ ಸದಸ್ಯ ಬಿ.ಎಲ್.ಧರ್ಮೇಗೌಡ ಗುರುವಾರ ನಾಲ್ಕನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿದ್ದಾರೆ.
ಬೇಲೂರು ಟೌನ್ ಸಹಕಾರ ಸಂಘದ 13 ಜನ ನಿರ್ದೇಶಕರ ಆಯ್ಕೆಗಾಗಿ ಕಳೆದ ಭಾನುವಾರ ಚುನಾವಣೆ ನಡೆದಿತ್ತು. ಆದರೆ ಗುರುವಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಬಿ.ಎಲ್.ಧರ್ಮೇಗೌಡ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾ ಸಹಕಾರ ಸಂಘದ ಅಧಿಕಾರಿ ರುಬಿಯಾ, ಅಧ್ಯಕ್ಷರಾಗಿ ಅವಿರೋಧವಾಗಿ ಬಿ.ಎಲ್.ಧರ್ಮೇಗೌಡ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ನೂತನ ಅಧ್ಯಕ್ಷ ಬಿ.ಎಲ್.ಧರ್ಮೇಗೌಡ ಮಾತನಾಡಿ, ಬೇಲೂರು ಟೌನ್ ಸಹಕಾರ ಸಂಘಕ್ಕೆ ನಾನು 20 ವರ್ಷಗಳಿಂದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ತಾಲೂಕಿನ ಮಹಿಳೆಯರು ಸ್ವಯಂ ಉದ್ಯೋಗಕ್ಕಾಗಿ ಹೊರ ಜಿಲ್ಲೆಗಳಿಗೆ ಕೆಲಸ ಹುಡುಕಿ ಹೋಗ ಬೇಕಾಗಿತ್ತು. ಇದನ್ನು ಮನಗಂಡು ನಮ್ಮ ಸದಸ್ಯರ ಸಹಕಾರದೊಂದಿಗೆ ಹಿಂದೆ ವರ್ತೂರು ಪ್ರಕಾಶ್ ಸಚಿವರಾಗಿದ್ದ ಸಂದರ್ಭ ಅವರ ಸಹಕಾರದಿಂದ 1.5 ಕೋಟಿ ರೂ, ಅಧಿಕ ಅನುದಾನ ತಂದು ಹೊಲಿಗೆ ಯಂತ್ರ ಖರೀದಿಸಿ ಒಂದು ಸಾವಿರಕ್ಕೂ ಅಧಿಕ ಮಹಿಳೆಯರು ಪಡೆದು ಮನೆಯಲ್ಲಿ ಸ್ವ ಉದ್ಯೋಗ ನಡೆಸುತ್ತಿದ್ದಾರೆ. ಕೆಲವರು ದೊಡ್ಡ ಕಂಪನಿಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈಗಿರುವ ಶಿಥಿಲಗೊಂಡಿರುವ ಕಟ್ಟಡ ತೆರವುಗೊಳಿಸಿ ವಾಣಿಜ್ಯ ಮಳಿಗೆ ನಿರ್ಮಿಸಿ ನಮ್ಮ ಸಹಕಾರ ಸಂಘಕ್ಕೆ ಹೆಚ್ಚಿನ ಆದಾಯ ಬರುವಂತೆ ಮಾಡಲಾಗುವುದು. ಇದಕ್ಕೆ ಎಲ್ಲ ಸದಸ್ಯರ ಸಹಕಾರ ಅಗತ್ಯ ಎಂದರು.
ಬೇಲೂರ‌್ಲು ಟೌನ್ ಸಹಕಾರ ಸಂಘದ ನಿರ್ದೇಶಕರಾದ ಕುಮಾರ್, ನಿಂಗಶೆಟ್ಟಿ, ವೀರಭದ್ರೇಗೌಡ, ಚಂದ್ರಶೇಖರ್, ರಾಮಚಂದ್ರ, ಪ್ರಕಾಶ್, ಬಿ ಎನ್,ನಾಗೇಶ್, ರಂಗನಾಥ್, ಸೋಮಶೇಖರ್, ಪಿ.ಟಿ.ಸೋಮೇಗೌಡ, ರಾಮನಾಯಕ್, ದಾಕ್ಷಾಯಿಣಿ, ಆಶಾ, ಕಾರ್ಯದರ್ಶಿ ನಂದಕುಮಾರ್ ಇದ್ದರು.