

ಶೃಂಗೇರಿ: ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣ ಜನರ ಪ್ರಗತಿಗಾಗಿ ಸಮಾಜಕ್ಕೆ ಅನೇಕ ಕೊಡುಗೆ ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಹೇಳಿದರು.
ರಾಜಾನಗರದ ವಿದ್ಯಾಭಾರತಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿದ್ಯಾರಣ್ಯಪುರದ ರುದ್ರಪಾದ ಹಿಂದು ರುದ್ರಭೂಮಿಗೆ ಹೆಚ್ಚುವರಿ ಸಿಲಿಕಾನ್ ಚೇಂಬರ್‌ನ ಪ್ರಮಾಣ ಪತ್ರವನ್ನು ತಾಲೂಕು ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳಿಗೆ ವಿತರಿಸಿ ಮಾತನಾಡಿದರು.
ಸಮಾಜದ ಅಭಿವೃದ್ಧಿಗಾಗಿ ಬ್ಯಾಂಕಿಂಗ್, ಆರೋಗ್ಯ ನಿಧಿ, ವಸತಿಸಹಿತ ಅನೇಕ ಕಾರ್ಯಕ್ರಮ ರೂಪಿಸಿದ್ದಾರೆ. ಮಹಿಳೆಯರಿಗೆ ಆರ್ಥಿಕ ಸಬಲತೆ ಮೂಲಕ ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಮಾಡಿದ್ದಾರೆ. ರೈತರ ಗುಂಪು ರಚಿಸಿ ಸಾಮೂಹಿಕ ಕೃಷಿ ಚಟುವಟಿಕೆ ನಡೆಸುವಂತೆ ಪ್ರೇರಣೆ ನೀಡಿದ್ದಾರೆ. ರುದ್ರಭೂಮಿಗೆ ಅನುಕೂಲವಾಗುವಂತೆ ಹೆಚ್ಚುವರಿಯಾಗಿ ಸಿಲಿಕಾನ್ ಚೇಂಬರ್ ನೀಡಲಾಗುತ್ತಿದೆ ಎಂದರು. ಯೋಜನಾಧಿಕಾರಿ ಸುರೇಶ್, ಮೇಲ್ವಿಚಾರಕಿ ಶಕುಂತಲಾ, ತಾಲೂಕು ಬ್ರಾಹ್ಮಣ ಮಹಾಸಭಾದ ಹರಕೆ ನಾಗಭೂಷಣ ರಾವ್, ಬಿ.ಎಲ್.ರವಿಕುಮಾರ್, ಬಂಡ್ಲಾಪುರ ಶ್ರೀಧರ ರಾವ್, ಸುಂಕುರ್ಡಿ ವಿವೇಕಾನಂದ, ಸಸಿಮನೆ ಶಿವಶಂಕರ್, ಎ.ಎಂ.ಶ್ರೀಧರ ರಾವ್, ಸುಮಂಗಲಾ ಆನಂದಸ್ವಾಮಿ, ಗಣಪತಿ, ಸುಧಾ ಇದ್ದರು.