ಧರ್ಮದ ಆಚಾರ, ವಿಚಾರಕ್ಕೆ ಮುಕ್ತ ಅವಕಾಶ ದೊರಕಲಿ

1111111
Published on

ಧರ್ಮದ ಆಚಾರ ಮತ್ತು ವಿಚಾರಕ್ಕೆ ಮುಕ್ತ ಅವಕಾಶ ದೊರಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಸುತ್ತೂರು ಜಾತ್ರಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲ ಭಾರತೀಯರು ಎಂದು ಹೇಳಿ ದೇಶದ ಒಗ್ಗಟ್ಟು ಮತ್ತು ಬಹುತ್ವ ಕಾಪಾಡಲು ಸಂವಿಧಾನ ನೆರವಾಗಿದೆ ಎಂದರು.

ಭಾರತದಲ್ಲಿ ಧಾರ್ಮಿಕ ಭಯೋತ್ಪಾದನೆ ಇದೆ. ಎಲ್ಲ ಧರ್ಮದಲ್ಲೂ ಕ್ರೋಧ ಇರುವ ಕಾರಣ ಜನ ಭಯಭೀತರಾಗಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಜಾತ್ರೆ ನಡೆಯುತ್ತಿದೆ. ಶ್ರೀಗಳು ಎಲ್ಲರನ್ನೂ ಸಮನ್ವಯಿಸಿ ಶಿಕ್ಷಣ, ದಾಸೋಹ ಹಾಗೂ ಧಾರ್ಮಿಕ ಕೆಲಸ ನೆರವೇರಿಸುತ್ತಿದ್ದಾರೆ. ಜಾತ್ರೆ- ಹಬ್ಬಗಳು ಸಾಮರಸ್ಯ ಮೂಲಕ ಆಚಾರ, ವಿಚಾರಗಳನ್ನು ಬೆಳೆಸುತ್ತವೆ. ಗ್ರಾಮೀಣ ಬದುಕನ್ನು ಉತ್ತಮವಾಗಿ ಕಟ್ಟಿಕೊಡುತ್ತವೆ ಎಂದರು.

ವಚನಗಳನ್ನೇ ತಿರುಚುವ ಕೆಲಸ: ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಅಕ್ಕ ಮಹಾದೇವಿ, ಬಸವಣ್ಣನವರ ವಚನ, ದಾಸ ಸಾಹಿತ್ಯಕ್ಕೂ ಅಂಬೇಡ್ಕರ್ ನೀಡಿರುವ ಸಂವಿಧಾನಕ್ಕೂ ಸಾಮ್ಯತೆ ಇದೆ. ಬಸವಣ್ಣ ಕಾಯಕದ ಬಗ್ಗೆ ಮಾತನಾಡಿದ್ದಾರೆ. ಹೆಚ್ಚು ಆಸ್ತಿ ಸಂಗ್ರಹ ಆಗಬಾರದು ಎಂದಿದ್ದಾರೆ. ಅವರ ವಚನ, ಸಂವಿಧಾನವನ್ನೇ ತಿರುಚುವ ಕೆಲಸವನ್ನು ಕೆಲವರು ಮಾಡುತ್ತಾರೆ. ವಚನದ ಸಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಡೆಸಬಹುದಾಗಿದೆ. ಇಂತಹ ಜಾತ್ರಾ ಮಹೋತ್ಸಗಳು ಬಸವಾದಿ ಶರಣರ ವಚನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡಲಿ ಎಂದು ಸಚಿವ ಎಚ್.ಕೆ.ಪಾಟೀಲ್ ಆಶಿಸಿದರು.

ಸಚಿವ ಬೋಸರಾಜು ಮಾತನಾಡಿ, ಶ್ರೀ ಮಠ ಶಿಕ್ಷಣ, ದಾಸೋಹ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ರಾಜ್ಯಕ್ಕೆ ಮತ್ತು ದೇಶಕ್ಕೆ ಮಾರ್ಗದರ್ಶನ ನೀಡಿದೆ ಎಂದರು.

ಸಾಂಸ್ಕೃತಿಕ ರಾಯಭಾರಿ:

ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪ್ರತಿ ವರ್ಷ ನಡೆಯುವ ಸುತ್ತೂರು ಜಾತ್ರೆ ಈ ಭಾಗದ ಧಾರ್ಮಿಕ, ಆರ್ಥಿಕ ಸೇರಿದಂತೆ ವಿವಿಧ ಆಯಾಮಗಳನ್ನು ಒಳಗೊಂಡ ಉತ್ಸವವಾಗಿದೆ ಎಂದು ಶ್ಲಾಘಿಸಿದರು.

ಶ್ರೀ ಮಠ ಈ ಭಾಗದ ಸಾಂಸ್ಕೃತಿಕ ರಾಯಭಾರಿಯಾಗಿದೆ. ಸುತ್ತೂರು ಜಾತ್ರೆ ಎಲ್ಲರಲ್ಲೂ ಜಾಗೃತಿ ಮೂಡಿಸುವ ಕಾಯಕ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬಸವಾದಿ ಶರಣರು ವಚನಗಳ ಮೂಲಕ ಜನರ ಬದುಕಿನ ದಾರಿ ಸುಗಮಗೊಳಿಸಿದರು. ಕಾಯಕ- ದಾಸೋಹ ತತ್ವ ಜಾಗೃತಿಗೊಳಿಸಿದರು. ಕರ್ನಾಟಕದ ಮಠಗಳು ಕಾಯಕ, ಸೇವೆ ಮಾಡುತ್ತಿರುವುದರ ಹಿಂದೆ ಬಸವಣ್ಣನವರ ಪ್ರೇರಣೆ ದೊಡ್ಡದಾಗಿದೆ ಎಂದು ಸ್ವಾಮೀಜಿ ಹೇಳಿದರು.

ಕರ್ನಾಟಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಸುತ್ತೂರು ಮಠ ರಾಜ್ಯದ ಪ್ರತಿಷ್ಠಿತ ಮಠವಾಗಿದೆ. ಸುತ್ತೂರು ಶ್ರೀಗಳು ಎಲ್ಲ ಕ್ಷೇತ್ರದಲ್ಲೂ ಕೆಲಸ ಮಾಡಿ ಸಾಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಜಾತ್ರೆಯಲ್ಲಿ ಜನಪರ ಕಾರ್ಯಕ್ರಮಗಳು ನಡೆದಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net