ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ

8sri-2 honour
ಶೃಂಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಬಿ.ಎಸ್.ರಾಜು ದಂಪತಿಯನ್ನು ಗೌರವಿಸಲಾಯಿತು. ಶಶಿಧರ್, ಅಭಿರಾಂ, ಪ್ರಕಾಶ್ ಇತರರಿದ್ದರು.
Published on

ಶೃಂಗೇರಿ: ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಇದ್ದರೆ ಸೇನೆಗೆ ಸೇರಿ ದೇಶ ಸೇವೆ ಮಾಡುವ ಉತ್ತಮ ಅವಕಾಶವಿದೆ ಎಂದು ಭಾರತೀಯ ಸೇನೆಯ ನಿವೃತ್ತ ಮಹಾ ಉಪ ದಂಡ ನಾಯಕ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಹೇಳಿದರು.

ವಿದ್ಯಾನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸೇನೆಯಲ್ಲಿ ಇರುವ ಅವಕಾಶಗಳ ಬಗ್ಗೆ ಮಾತನಾಡಿದರು.

ಭಾರತೀಯ ಯುವಜನತೆಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದೇ ಅದ್ಭುತ ಅವಕಾಶ. ಸೇನೆಗೆ ಸೇರ್ಪಡೆಗೊಳ್ಳಲು ವಿದ್ಯಾರ್ಥಿ ಜೀವನದಿಂದ ಪ್ರಯತ್ನ ನಡೆಸಬೇಕು. ಸೇನೆ ಎಂದರೆ ಯೋಧರಾಗಿ ಮಾತ್ರವಲ್ಲದೇ ವಿವಿಧ ಅವಕಾಶ ಲಭ್ಯವಿದೆ. ಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಲು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸೇರ್ಪಡೆಗೊಳ್ಳಬೇಕು. ಅದರಲ್ಲಿಯೂ ಹಂತ ಹಂತವಾಗಿ ಮೇಲೇರಲು ವಿಪುಲವಾದ ಅವಕಾಶವಿದೆ. ಮಹಿಳೆಯರಿಗೂ ಸೇನೆಯಲ್ಲಿ ಸೇರುವ ಅವಕಾಶವಿದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ನಿರಂಜನಕುಮಾರ್ ಮಾತನಾಡಿ, ನಮ್ಮ ಜಿಲ್ಲೆಯಿಂದ ಸೇನೆಯಲ್ಲಿ ಅತ್ಯುನ್ನತ ಪದವಿಗೆ ಏರಿದ ಉಪದಂಡನಾಯಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ದೊರಕಿದೆ. ವಿದ್ಯಾರ್ಥಿಗಳು ಅವರ ಸ್ಫೂರ್ತಿಯಿಂದ ದೇಶ ಸೇವೆಗೆ ಮುಂದಾಗಬೇಕು ಎಂದರು.

ನಿವೃತ್ತ ಲೆಫ್ಟಿನೆಂಟ್ ಬಿ.ಎಸ್.ರಾಜು ಮತ್ತು ಅವರ ಪತ್ನಿ ಶಕುಂತಲಾ ಅವರನ್ನು ಗೌರವಿಸಲಾಯಿತು. ಉಪ ಪ್ರಾಚಾರ್ಯ ಶಶಿಧರ್, ಅಭಿರಾಂ, ಕೌಸ್ತುಭಾ ಭಟ್, ಎಚ್.ಎ.ಪ್ರಕಾಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net