

ಬೆಟ್ಟದಪುರ: ಬೆಟ್ಟದಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ದ್ವಿತೀಯ ಪಿಯು ಪರೀಕ್ಷೆಯ ಮೊದಲ ದಿನ ಸುಸೂತ್ರವಾಗಿ ನಡೆಯಿತು.
ಈ ವ್ಯಾಪ್ತಿಯ ಕಣಗಾಲು, ಹಾರನಹಳ್ಳಿ, ಹಲಗನಹಳ್ಳಿ ಹಾಗೂ ಬೆಟ್ಟದಪುರ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳನ್ನು ಒಳಗೊಂಡಂತೆ ಒಟ್ಟು ಏಳು ಕಾಲೇಜುಗಳಿಂದ 680 ವಿದ್ಯಾರ್ಥಿಗಳ ಪೈಕಿ ಮೊದಲ ದಿನದ ಕನ್ನಡ ಪರೀಕ್ಷೆಗೆ 660 ವಿದ್ಯಾರ್ಥಿಗಳು ಹಾಜರಾಗಿದ್ದರು. 20 ವಿದ್ಯಾರ್ಥಿಗಳು ಗೈರಾಗಿದ್ದರು. ಒಟ್ಟು 23 ಕೊಠಡಿಗಳನ್ನು ಪರೀಕ್ಷೆಗೆ ಬರೆಯಲು ಅನುವು ಮಾಡಿಕೊಡಲಾಗಿತ್ತು.
ವಿದ್ಯಾರ್ಥಿಗಳಿಗೂ ಅನುಕೂಲವಾಗುವ ರೀತಿಯಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಪ್ರಾಂಶುಪಾಲ ಜ್ಯೋತಿ ಪ್ರಸಾದ್ ವಿಜಯವಾಣಿಗೆ ಮಾಹಿತಿ ನೀಡಿದರು.
ಮೊದಲ ದಿನ ತಮ್ಮ ಪಾಲಕರೊಂದಿಗೆ ಪರೀಕ್ಷೆ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳು ಆತಂಕದಲ್ಲಿ ಕೊಠಡಿ ಸಂಖ್ಯೆಯನ್ನು ಗಮನಿಸಿ, ಪರೀಕ್ಷೆಗೆ ಹಾಜರಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಗೋಚರಿಸಿತು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.