ದೌರ್ಜನ್ಯದ ವಿರುದ್ಧ ಹೋರಾಡುವ ಮನಸ್ಥಿತಿ ಬೆಳೆಸಿಕೊಳ್ಳಿ

1
Published on

ಮಹಿಳೆಯರ ಅಭ್ಯುದಯಕ್ಕೆ ಬೆಂಬಲ ನೀಡಿದರಷ್ಟೇ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವಿಭಾಗೀಯ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್ ಹೇಳಿದರು.

ಮೈಸೂರು ತಾಲೂಕಿನ ಕೀಳನಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಬೆಳಕು ಗ್ರಾಮೀಣ ಮಹಿಳಾ ಒಕ್ಕೂಟ, ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಮಹಿಳೆಯರು ಮನೆ ಕೆಲಸಗಳಿಗೆ ಮಾತ್ರ ಸೀಮಿತವಾಗಿದ್ದರು. ದೇಶಕ್ಕೆ ಸ್ವಾತಂತ್ರೃ ಬಂದ ನಂತರ ನಮ್ಮ ಸಂವಿಧಾನವು ಮಹಿಳೆಯರಿಗೆ ಎಲ್ಲ ಹಕ್ಕು, ಸ್ಥಾನಮಾನವನ್ನು ನೀಡಿದೆ. ಸಂವಿಧಾನ ನೀಡಿರುವ ಹಕ್ಕುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ಅಭಿವೃದ್ಧಿ ಸಾಧಿಸಬೇಕು. ತಮ್ಮ ಮೇಲಾಗುವ ದೌರ್ಜನ್ಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮಹಿಳೆಯರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸಮಾನ ಅವಕಾಶ ಒದಗಿಸಬೇಕು. ಮಹಿಳೆ ಪ್ರಪಂಚದ ದೊಡ್ಡ ಶಕ್ತಿ. ಮಹಿಳೆಗೆ ಇನ್ನೊಂದು ಜೀವಕ್ಕೆ ಜನ್ಮ ನೀಡುವ ಶಕ್ತಿ ಹಾಗೂ ಇಡೀ ಕುಟುಂಬವನ್ನು ನಿರ್ವಹಿಸುವ ಶಕ್ತಿ ಇದೆ ಎಂದು ಹೇಳಿದರು.

ಆನೇಕಲ್ ಗಮನ ಮಹಿಳಾ ಸಮೂಹದ ಮುಖ್ಯಸ್ಥೆ ಮಮತಾ ಯಜಮಾನ್ ಮಾತನಾಡಿ, ಮಹಿಳಾ ಗ್ರಾಮ ಸಭೆ ಮತ್ತು ಅದರ ಮಹತ್ವವನ್ನು ಎಲ್ಲರೂ ಅರಿಯಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಥಾಯಿ ಸಮಿತಿ ಹಾಗೂ ಒಕ್ಕೂಟ ಮಾಡಿಕೊಂಡು ನಿಮ್ಮ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಇಂದು ಮಹಿಳೆಯರು ಆಟೋ ರಿಕ್ಷಾದಿಂದ ಅಂತರಿಕ್ಷ ತಲುಪುವ ರಾಕೆಟ್ ಉಡಾವಣೆ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಮಹಿಳೆಯರಲ್ಲಿ ಎಂತಹ ಅಭೂತಪೂರ್ವ ಆತ್ಮವಿಶ್ವಾಸ ಮತ್ತು ಶ್ರದ್ಧೆ ಇದೆ ಎಂಬುದನ್ನು ತೋರಿಸುತ್ತದೆ. ಹೆಣ್ಣು ಶಕ್ತಿಯ ಪ್ರತೀಕವಾಗಿದ್ದು, ಯಾರನ್ನೂ ಅವಲಂಭಿಸದೇ ಸ್ವತಂತ್ರವಾಗಿ, ಆತ್ಮ ವಿಶ್ವಾಸದಿಂದ ಬದುಕುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಯಾವುದೇ ಭಯವಿಲ್ಲದೆ ಶೋಷಣೆ, ದೌರ್ಜನ್ಯದ ವಿರುದ್ಧ ದನಿ ಎತ್ತಿ ಎದುರಿಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದಿಂದ ಮಾತ್ರ ಜೀವನ ರೂಪಿಸಿಕೊಳ್ಳಲು ಸಾಧ್ಯವಿದ್ದು, ಮಹಿಳೆಯರು ಯಾವುದಕ್ಕೂ ಎದೆಗುಂದದೆ, ಯಾರನ್ನೂ ಅವಲಂಬಿಸದೆ ನಿಶ್ಚಿತ ಗುರಿ ಇಟ್ಟುಕೊಂಡು ಸಮಾಜಕ್ಕೆ ನಿಮ್ಮದೇ ಆದ ಕೊಡುಗೆ ನೀಡಿ ಎಂದರು.

ಸಮಾಜದಲ್ಲಿ ಇಂದಿಗೂ ಹೆಣ್ಣು ಮಕ್ಕಳೆಂದರೆ ಕೀಳರಿಮೆ ಇದೆ. ಅದನ್ನು ಮೆಟ್ಟಿ ನಿಲ್ಲಲು ಮಹಿಳೆಯರು ಸಿದ್ಧರಿರಬೇಕು. ನಮ್ಮದೇ ಆದ ಅಸ್ತಿತ್ವ ಉಳಿಸಿಕೊಂಡು, ಆರೋಗ್ಯದ ಕಡೆ ಹೆಚ್ಚು ಗಮನಕೊಡಬೇಕು. ಜತೆಗೆ ಜಾಗೃತರಾಗಿ ಮತ್ತು ಸ್ವಾವಲಂಬಿಗಳಾಗಿ ಬದುಕಬೇಕು ಎಂದು ತಿಳಿಸಿದರು.

ಆರ್‌ಎಲ್‌ಎಚ್‌ಪಿ ನಿರ್ದೇಶಕಿ ಸರಸ್ವತಿ ಮಾತನಾಡಿ, ಸಂಸ್ಥೆಯು 40 ವರ್ಷಗಳಿಂದ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮಹಿಳೆ, ಮಕ್ಕಳು ಮತ್ತು ಯುವ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನೇರಳೆ ಬಣ್ಣವು ಮಹತ್ವದ ಬಣ್ಣವಾಗಿದ್ದು, ನ್ಯಾಯ, ಘನತೆ ಮತ್ತು ನಿಷ್ಠೆಯನ್ನು ಸಂಕೇತಿಸುತ್ತದೆ. ಇದನ್ನು ಮಹಿಳಾ ಹಕ್ಕುಗಳ ಸಂಕೇತವಾಗಿ ಮತ್ತು ಸಮಾನತೆಗಾಗಿ ಹೋರಾಟವನ್ನು ಪ್ರತಿನಿಧಿಸುತ್ತದೆ. ನೇರಳೆ ಬಣ್ಣವನ್ನು ಅಂತಾರಾಷ್ಟ್ರೀಯ ಮಹಿಳಾ ದಿನದ ಬಣ್ಣವೆಂದು ವ್ಯಾಪಕವಾಗಿ ಗುರುತಿಸಲಾಗಿದೆ. ಜತೆಗೆ ನೇರಳೆ ಬಣ್ಣವನ್ನು ಧರಿಸುವುದು ಮಹಿಳಾ ಹಕ್ಕುಗಳು ಮತ್ತು ಸಮಾನತೆಯ ಕಾರಣಕ್ಕಾಗಿ ಒಗ್ಗಟ್ಟನ್ನು ತೋರಿಸುವ ಒಂದು ಮಾರ್ಗವಾಗಿದೆ ಎಂದರು.

ಮೈಸೂರು ತಾಪಂ ಇಒ ಸಿ. ಕೃಷ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ಆಸ್ಪತ್ರೆ ವೈದ್ಯ ಡಾ. ಸುರೇಶ್, ಕೀಳನಪುರ ಗ್ರಾಪಂ ಅಧ್ಯಕ್ಷ ನಂಜುಂಡಸ್ವಾಮಿ, ಗ್ರಾಮದ ಮುಖಂಡ ಮಹದೇವಪ್ಪ, ಪಿಡಿಒ ಮಾಯಪ್ಪ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net