ದೈವತ್ವಕ್ಕೆ ಏರಿದ ಶ್ರೀ ಯೋಗಿ ನಾರೇಯಣ ಯತೀಂದ್ರರು,ಅಪರ ಜಿಲ್ಲಾಧಿಕಾರಿ

CTD KIYVARA TATYAY JYANTI..
Published on

ಚಿತ್ರದುರ್ಗ:ಮನುಷ್ಯರಾಗಿ ಜನಿಸಿ ದೈವತ್ವಕ್ಕೆ ಏರಿದ ಮಹಾನ್ ಪುರುಷ ಶ್ರೀ ಯೋಗಿ ನಾರೇಯಣ ಯಂತೀದ್ರರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ(ಕೈವಾರ ತಾತಯ್ಯ)ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

1726ರಲ್ಲಿ ಮುದ್ದಮ್ಮ ಹಾಗೂ ಕೊಂಡಪ್ಪ ದಂಪತಿ ಮಗನಾಗಿ ಕೈವಾರದಲ್ಲಿ ಯೋಗಿ ನಾರೇಯಣರು ಜನಿಸಿದ್ದರು. ಇವರು ಮೂಲ ಹೆಸರು ನಾರಾಯಣಪ್ಪ. ಬಲಿಜ ಸಮುದಾಯದ ಇವರು ವ್ಯಾಪಾರದಲ್ಲಿ ದೇವರನ್ನು ಕಂಡಿದ್ದವರು. ಲೌಕಿಕ ಜಗತ್ತಿನಿಂದ ಅಲೌಕಿಕದೆಡೆಗೆ ಸಾಗಿದವರು. ಬದುಕಿನ ಉದ್ದಕ್ಕೂ ಅನೇಕ ಪವಾಡಗಳನ್ನು ಮಾಡಿದರು. ಸಮಾಜದ ಅಂಕು ಡೊಂಕುಗಳನ್ನು ತಿದ್ದಿದರು. ದಿವ್ಯ ಜ್ಞಾನದಿಂದ ಕಾಲಜ್ಞಾನ ರಚಿಸಿದರು. ಬಲಿಜ ಸಮುದಾಯ ಅತ್ಯಂತ ಸ್ವಾಭಿಮಾನಿ ಸಮಾಜವಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಇನ್ನೂ ಹೆಚ್ಚಿನ ಸ್ಥಾನಮಾನ ಗಳಿಸುವಂತೆ ಪ್ರೇರಣೆ ನೀಡಿದ್ದರು ಎಂದು ತಿಳಿಸಿದರು.

ಸಾಹಿತಿ ಹುರುಳಿ ಬಸವರಾಜ್ ಉಪನ್ಯಾಸ ನೀಡಿ, ಯತೀಂದ್ರರು ರಚಿಸಿದ ಕಾಲಜ್ಞಾನ ಭವಿಷ್ಯದಲ್ಲಿನ ಪ್ರಳಯದ ಮುನ್ಸೂಚನೆಗಳನ್ನು ನೀಡಿದೆ ಎಂದರು.

ರಾಮಾಯಣ, ಮಹಾಭಾರತದ ನಂಟು ಕೈವಾರಕ್ಕೆ ಇದೆ. ಮಹಿಷಾಸುರನನ್ನು ಕೊಂದ ದೇವಿ ತನ್ನ ಉಗ್ರರೂಪ ತೊರೆದು ಶಾಂತವಾದ ಸ್ಥಳ ಕೈವಾರವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಇಂತಹ ಸ್ಥಳದಲ್ಲಿ ಜನಿಸಿದ ನಾರಾಯಣಪ್ಪ ಮುಂದೆ ಶ್ರೀ ಯೋಗಿನಾರೇಯಣ ಯತೀಂದ್ರರಾಗಿ ಪ್ರಸಿದ್ಧರಾಗಿ ಕೈವಾರ ತಾತಯ್ಯ ಎಂಬ ಹೆಸರಿನಿಂದ ಪ್ರಖ್ಯಾತರಾದರು ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ಬಲಿಜ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ. ಗುರುನಾಥ್ ಸ್ವಾಗತಿಸಿದರು. ರಕ್ಷಾ ಕುರುಬರಹಳ್ಳಿ ಪ್ರಾರ್ಥಿಸಿದರು. ಗಾಯಕ ಮುತ್ತುರಾಜ ತಂಡ ಗೀತಗಾಯನ ನಡೆಸಿಕೊಟ್ಟಿತು. ನವೀನ್ ಮಸ್ಕಲ್ ನಿರೂಪಿಸಿದರು.

ಕುಡಾ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಆರ್. ಶಿವಣ್ಣ, ನಗರಸಭೆ ಆಯುಕ್ತೆ ಎಂ. ರೇಣುಕಾ, ಜಿಲಾ ್ಲಶ್ರೀ ಯೋಗಿ ನಾರೇಯಣ ಯಂತೀದ್ರ ಬಲಿಜ ಸಂಘದ ಅಧ್ಯಕ್ಷ ಎಂ.ಎ. ಸೇತುರಾಮ್, ಕಾರ್ಯದರ್ಶಿ ಎಂ. ಗಂಗಣ್ಣ, ತಾಲೂಕು ಸಂಘದ ಅಧ್ಯಕ್ಷ ಎಂ.ಜಿ. ಸೂರ್ಯನಾರಾಯಣ, ಶ್ರೀಯೋಗಿನಾರೇಯಣ ಸೌಹಾರ್ದ ಪತ್ತಿನ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಕೆ. ಪ್ರಹ್ಲಾದ್,ಬೊಮ್ಮೇನಹಳ್ಳಿ ಶ್ರೀ ಯೋಗಿನಾರೇಯಣ ಯತೀಂದ್ರ ವಿದ್ಯಾಸಂಸ್ಥೆ ಅಧ್ಯಕ್ಷ ಎಂ.ವಿ. ರಾಮದಾಸಪ್ಪ, ಬೋಮ್ಮೇನಹಳ್ಳಿ ಶ್ರೀ ಯೋಗಿನಾರೇಯಣ ಯತೀಂದ್ರ ಸಂಘದ ಅಧ್ಯಕ್ಷ ವಿರೂಪಾಕ್ಷಪ್ಪ ಸೇರಿ ಬಲಿಜ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಶ್ರೀ ನೀಲಕಂಠೇಶ್ವರ ದೇವಸ್ಥಾನ ಬಳಿ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಚಾಲನೆ ನೀಡಿದರು.

ಶ್ರೀ ಯೋಗಿನಾರೇಯಣ ಯತೀಂದ್ರ, ಬಲಿಚಕ್ರವರ್ತಿ, ಶ್ರೀ ಕೃಷ್ಣದೇವರಾಯ, ಜ್ಯೋತಿಬಾಫುಲೆ, ಸಾವಿತ್ರಿಬಾಯಿಫುಲೆ ಅವರ ಭಾವ ಚಿತ್ರಗಳು, ಸಾಂಸ್ಕೃತಿಕ ಕಲಾ ತಂಡಗಳಿದ್ದ ಮೆರವಣಿಗೆ ಗಾಂಧಿ, ಎಸ್‌ಬಿಐ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮದಕರಿ ನಾಯಕ ವೃತ್ತ ಗಳ ಮೂಲಕ ತರಾಸು ರಂಗಮಂದಿರ ತಲುಪಿತು.

ಯತೀಂದ್ರರ ಭಕ್ತಿ ಚಿಂತನೆ ಸಮಾಜಕ್ಕೆ ಮಾದರಿ

ಚಳ್ಳಕೆರೆ: ಲೋಕ ಜ್ಞಾನಿಯಾಗಿದ್ದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಬದುಕಿನ ಆದರ್ಶ, ಸಮಾಜದಲ್ಲಿ ಪೋಷಣೆ ಆಗಬೇಕು ಎಂದು ತಹಸೀಲ್ದಾರ್ ರೇಹಾನ್ ಪಾಷಾ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪಟ್ಟಣದ ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 299ನೇ ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಪವಾಡ ಪುರುಷರಾಗಿದ್ದ ಯತೀಂದ್ರ ಅವರಿಗೆ ದೂರದೃಷ್ಟಿಯ ಚಿಂತನೆ ಇತ್ತು. ಅವರು ಬರೆದ ಕಾಲಜ್ಞಾನದಂತೆ ಸತ್ಯ ಸಂಗತಿಗಳು ಜಗತ್ತಿನಲ್ಲಿ ನಡೆಯುತ್ತಿವೆ. ಯತೀಂದ್ರ ಅವರ ಭಕ್ತಿ ಚಿಂತನೆ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ಬಲಿಜ ಸಮಾಜದ ಅಧ್ಯಕ್ಷ ಬಿ.ಸಿ. ಸಂಜೀವಮೂರ್ತಿ ಮಾತನಾಡಿ, ಸಮಾಜದ ದಾರ್ಶನಿಕರು, ಸುಧಾರಕರು ಮತ್ತು ಸಾಧು-ಸಂತರ ಸ್ಮರಣೆ ಒಂದು ಜಾತಿ, ವರ್ಗಕ್ಕೆ ಸೀಮಿತವಾಗಬಾರದು. ಸಮಾಜದ ಸುಧಾರಣೆಗಾಗಿ ಜೀವನಪರ್ಯಂತ ಆದರ್ಶವಾಗಿ ಬದುಕಿದ ಮಹನೀಯರನ್ನು ಸರ್ವರೂ ಅನುಕರಿಸಬೇಕು ಎಂದು ತಿಳಿಸಿದರು.

ಆರ್. ವೆಂಕಟೇಶಮೂರ್ತಿ ಉಪನ್ಯಾಸ ನೀಡಿ, ಕೋಲಾರ ಜಿಲ್ಲೆಯ ಕೈವಾರ ಎನ್ನುವ ಪುಣ್ಯಸ್ಥಳದಲ್ಲಿ ಶ್ರೀ ಯೋಗಿ ನಾರೇಯಣ ಯತೀಂದ್ರ ಜನಿಸಿದರು. ಅವರು ಬರೆದ ಕಾಲಜ್ಞಾನ ಗ್ರಂಥದಲ್ಲಿ ದೇಶವನ್ನು ಪರದೇಶದವರು ಆಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾಗುತ್ತದೆ ಎನ್ನುವ ಭವಿಷ್ಯ ಸತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿ.ವಿ. ಚಿದಾನಂದಮೂರ್ತಿ, ಬಿ.ಕೆ. ರಾಜು, ವಿ. ರಾಘವೇಂದ್ರ, ಬಿ. ಸುರೇಶ್‌ಬಾಬು, ನಿರಂಜನಮೂರ್ತಿ, ಲಕ್ಷ್ಮಣ್, ರಘು, ಅನಿಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net