

ಬೆಂಗಳೂರು:
ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನಾಚಾರ ನಿಯಂತ್ರಿಸುವ ಅನಿವಾರ್ಯತೆಯಿದೆ.
ಈ ನಿಟ್ಟಿನಲ್ಲಿ ಸರ್ಕಾರದ ಕೆಲ ಕಾಯ್ದೆಗಳಲ್ಲಿ ಬದಲಾವಣೆಗಳಾಗಬೇಕಾಗಿದೆ. ಪ್ರಸ್ತುತ ಸಮಾಜದಲ್ಲಿ ಒಬ್ಬೊಬ್ಬರಿಗೆ ಒಂದೊಂದು ನ್ಯಾಯ ಎಂಬಂತಾಗಿದೆ ಎಂದು ಕೊಳದ ಮಠ ಮಹಾ
ಸಂಸ್ಥಾನದ ಶ್ರೀ ಡಾ.ಶಾಂತವೀರ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಪಂಪಮಹಾಕವಿ ರಸ್ತೆಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ.ಶಾಹ್ ಇ ಅಕ್ಬರ್ ಬಾಷಾ ಅವರ ‘ಕೇಸರಿ ಹಸಿರು ಸಮಾಗಮ’ ಕೃತಿ ಲೋಕಾರ್ಪಣೆಗೊಳಿಸಿ ಈ ಕುರಿತು ಮಾತನಾಡಿದರು.
ಭ್ರಷ್ಟರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳ ಶಕ್ತಿ ಕುಂದುತ್ತಿದೆ. ನಮ್ಮ ಅಂತರಂಗ, ಬಹಿರಂಗ ಶುದ್ದಿಯಾಗಬೇಕಿದೆ. ಈ ನಿಟ್ಟಿನಲ್ಲಿ 12ನೇ ಶತಮಾನದಲ್ಲಿ ನಡೆದ ಕ್ರಾಂತಿ ಮತ್ತೊಮ್ಮೆ ಆಗಬೇಕಾದ ಸನ್ನಿವೇಶ ಎದುರಾಗಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಕೆಲ ಕಾಯ್ದೆಗಳಲ್ಲಿ ಬದಲಾವಣೆಗಳಾಗಬೇಕಿದೆ. ಎಲ್ಲರೂ ಅಧರ್ಮ, ಭ್ರಷ್ಟಾಚಾರಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದಾರೆ. ಧೈರ್ಯವಾಗಿ ಇಂತಹ ಸನ್ನಿವೇಶಗಳನ್ನು ಸಮಾಜದ ಮುಂದೆ ಹೇಳಬೇಕು. ಧೈರ್ಯವಾಗಿ ಹೇಳಿ ಜಯಿಸುವವನೇ ನಿಜವಾದ ಮಹಾನುಭಾವ. ಸರ್ಕಾರಗಳು ಎಲ್ಲ ಧರ್ಮಗಳಿಗೂ ಸಮಾನವಾದ ಮಹತ್ವವನ್ನು ಕೊಡಬೇಕು. ಇತ್ತೀಚೆಗೆ ಯಾವ ಕ್ಷೇತ್ರದಲ್ಲಿ ಯಾರು ಹೇಗಿರಬೇಕು ಎಂಬುದನ್ನೇ ಮರೆತು ಬಿಟ್ಟಿದ್ದಾರೆ ಎಂದು ಹೇಳಿದರು.