

ನವದೆಹಲಿ: ಕರೊನಾ ಸಾಂಕ್ರಾಮಿಕಕ್ಕೆ ಔಷಧ ಸಿದ್ಧಗೊಳ್ಳುತ್ತಿದ್ದು, ಸಾರ್ವಜನಿಕವಾಗಿ ಬಿಡುಗಡೆಯಾದ ನಂತರ ದೇಶದ ಪ್ರತಿಯೊಬ್ಬರಿಗೆ ಕರೊನಾ ಲಸಿಕೆ ದೊರೆಯಲಿದೆ. ಚುನಾವಣಾ ಅಥವಾ ಪ್ರಾಕೃತಿಕ ವಿಪತ್ತು ನಿರ್ವಹಣೆಗೆ ನೀಡುವಷ್ಟೇ ತುರ್ತು ಗಮನವನ್ನು ಲಸಿಕೆ ಪೂರೈಕೆಗೆ ನೀಡಲಾಗುತ್ತದೆ. ಇದಕ್ಕಾಗಿಯೇ ವ್ಯವಸ್ಥಿತ ಜಾಲ ರಚಿಸಲಾಗುತ್ತದೆ. ಆದರೆ, ಮೊದಲ ಆದ್ಯತೆ ಕರೊನಾ ವಾರಿಯರ್ಸ್ಗೆ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಔಷಧ ಉಪಲಬ್ಧವಾದ ನಂತರ ಅದನ್ನು ಹೇಗೆ ವಿತರಿಸಬೇಕು ಎಂಬ ಬಗ್ಗೆ ರಾಷ್ಟ್ರೀಯ ತಜ್ಞರ ಗುಂಪು ಈಗಾಗಲೇ ಕಾರ್ಯೋನ್ಮುಖವಾಗಿದೆ. ಲಸಿಕೆ ದಾಸ್ತಾನಿಗೆ 28 ಸಾವಿರಕ್ಕೂ ಅಧಿಕ ಶೈತ್ಯಾಗಾರಗಳನ್ನು ಸಿದ್ಧಪಡಿಸಲಾಗಿದ್ದು, ದೇಶದ ಮೂಲೆಮೂಲೆಗೂ ಔಷಧ ಪೂರೈಕೆ ಆಗಲಿದೆ. ಫಲಾನುಭವಿಗಳ ನೋಂದಣಿ, ಸರಬರಾಜಿನ ಸ್ಥಿತಿಗತಿ ಮತ್ತು ತಲುಪಿರುವ ಮಾಹಿತಿಯನ್ನು ಡಿಜಿಟಲ್ ವೇದಿಕೆ ಮೂಲಕ ನಿರ್ವಹಿಸಲಾಗುತ್ತದೆ ಎಂದು ಆಂಗ್ಲ ದೈನಿಕಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕರೊನಾ ಸಂಕಷ್ಟದಲ್ಲೂ ಕೃಷಿ ವಲಯ ಪ್ರಗತಿದಾಯಕವಾಗಿರುವುದು ಸಂತಸದ ವಿಚಾರ. ಬೇಸಾಯದಲ್ಲಿ ದೈಹಿಕ ಅಂತರವು ಸ್ವಾಭಾವಿಕವಾಗಿಯೇ ಸಾಧ್ಯವಾಗಿದೆ. ಇದರಿಂದ ಉತ್ಪಾದನೆಗೇನೂ ಸಮಸ್ಯೆ ಆಗಿಲ್ಲ. ಚೆನ್ನಾಗಿ ಮಳೆ ಆಗಿರುವ ಕಾರಣ ಮತ್ತು ವಲಸಿಗರು ಗ್ರಾಮಗಳಿಗೆ ಮರಳಿರುವು ದರಿಂದ ಈ ಸಾರಿ ಕೃಷಿ ಉತ್ತಮ ವಾಗಿದ್ದು, ಫಸಲು ಸಮೃದ್ಧಿಯಾಗಿ ದೊರೆಯುವ ನಿರೀಕ್ಷೆ ಇದೆ. ಇದರಿಂದ ಆರ್ಥಿಕತೆಗೂ ಪೂರಕ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಉಂಟು.
ಬಹುಕಾಲದಿಂದ ಬಾಕಿ ಆಗಿದ್ದ ಸುಧಾರಣೆಯನ್ನು ಸರ್ಕಾರ ಮಾಡುತ್ತಿದೆ. ವಿರೋಧ ಪಕ್ಷಗಳು ಇದನ್ನು ಶ್ಲಾಘಿಸುವುದನ್ನು ಬಿಟ್ಟು ಅಣಕ ಮಾಡುತ್ತಿವೆ. ಸಮಗ್ರ ಅಭಿವೃದ್ಧಿಯಾಗದ ಹೊರತು ದೇಶದ ಶ್ರಮಿಕ ವರ್ಗಕ್ಕೆ ಸುಧಾರಣೆಯ ಲಾಭ ದೊರೆಯದು. ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ನವಭಾರತದ ಮಾರುಕಟ್ಟೆ ಮತ್ತು ಮಾರುಕಟ್ಟೆಯ ಬಲವನ್ನು ವಿಶ್ವದೆದುರಿಗೆ ತೆರದಿಡುವ ಪ್ರಯತ್ನವೂ ಆಗಿದೆ. ಸುಧಾರಣೆ ಕ್ರಮಗಳು ಪಾರದರ್ಶಿಯಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿದ್ದು, ಜನರ ಜೀವನವನ್ನು ಪ್ರಭಾವಿಸುತ್ತಿವೆ.
ಜನರಲ್ಲಿನ ಸ್ಥಿತಿಸ್ಥಾಪಕತ್ವದ ಗುಣದಿಂದ ಕರೊನಾ ಸಂಕಷ್ಟದ ಮಧ್ಯೆಯೂ ದೇಶದ ಆರ್ಥಿಕತೆ ಪುಟಿದೇಳುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ವೃದ್ಧಿಯಾಗಲಿದೆ. ಆದ್ದರಿಂದ 2024ರ ಹೊತ್ತಿಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಸಾಮರ್ಥ್ಯ ದೇಶಕ್ಕೆ ಇದೆ.