

ಶಿವಮೊಗ್ಗ: ಕೃಷಿಯು ರೈತರ ಜೀವನೋಪಾಯ ಮತ್ತು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಜತೆಗೆ ರಾಷ್ಟ್ರ ನಿರ್ಮಾಣದಲ್ಲೂ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಎಂದು ಜಿಪಂ ಸಿಇಒ ಎನ್.ಹೇಮಂತ್ ಅಭಿಪ್ರಾಯಪಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿ, ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ವಿಜ್ಞಾನಿಗಳು ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ಏರ್ಪಡಿಸಿರುವ 10 ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಸೋಮವಾರ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಕೃಷಿ ಹೆಚ್ಚಿನ ವೃತ್ತಿಪರತೆ ಪಡೆದುಕೊಂಡಿದೆ. ದೇಶದ ಆರ್ಥಿಕ ಮಟ್ಟ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಸಮಗ್ರ ಕೃಷಿ ಪದ್ಧತಿಯನ್ನು ಸಣ್ಣ ಮತ್ತು ಮಧ್ಯಮ ರೈತರು ಹೆಚ್ಚಾಗಿ ಅಳವಡಿಸಿಕೊಂಡರೆ ರೈತರು ಆರ್ಥಿಕ ಸ್ಥಿತಿ ಸುಧಾರಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಿಗುವ ಕೃಷಿ ತ್ಯಾಜ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅದನ್ನು ಮರು ಬಳಕೆ ಮಾಡಬೇಕು. ಈ ಮೂಲಕ ಭೂ ಫಲವತ್ತತೆ ಹೆಚ್ಚಿಸುವ ಬಗ್ಗೆ ವಿಜ್ಞಾನಿಗಳು ರೈತರಿಗೆ ಮಾಹಿತಿ ನೀಡಬೇಕು. ಹತ್ತು ದಿನಗಳ ತರಬೇತಿಯಲ್ಲಿ ಕೃಷಿಯಲ್ಲಿನ ಲಾಭ, ಉದ್ಯೋಗ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಆಹಾರ, ಪೌಷ್ಟಿಕಾಂಶ ಭದ್ರತೆ ಸಾಧಿಸಲು ಸಮಗ್ರ ಕೃಷಿ ಪದ್ಧತಿ, ವಿವಿಧ ವಿಧಾನಗಳ ಹೆಚ್ಚಿನ ಮಾಹಿತಿ ಪಡೆದು ರೈತರಿಗೆ ಈ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ತರಬೇತಿಯಲ್ಲಿ ಭಾಗವಹಿಸಿದ ವಿಜ್ಞಾನಿಗಳು ಸಮಗ್ರ ಕೃಷಿ ಪದ್ಧತಿಯಲ್ಲಿ ಇನ್ನು ಹೆಚ್ಚಿನ ಜ್ಞಾನ ಪಡೆದು ರೈತರ ಆರ್ಥಿಕ ಮಟ್ಟ ಹೆಚ್ಚಿಸುವಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿ ಶಿಕ್ಷಣ ನಿರ್ದೇಶಕ ಡಾ. ಬಿ.ಹೇಮ್ಲಾ ನಾಯ್ಕ, ಸಂಶೋಧನಾ ನಿರ್ದೇಶನ ಡಾ. ದುಷ್ಯಂತ್‌ಕುಮಾರ್, ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಪ್ರಮುಖರಾದ ಡಾ. ಎಸ್.ಯು.ಪಾಟೀಲ, ಡಾ. ಎನ್.ಎಸ್.ಮಾವರ್ಕರ್, ಡಾ. ಡಿ.ತಿಪ್ಪೇಶ್, ಡಾ.ಪ್ರದೀಪ್, ಡಾ. ಹನುಮಂತಸ್ವಾಮಿ ಇತರರಿದ್ದರು.