

ಬೆಂಗಳೂರು: ಭಾರತೀಯ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವ ಮೂಲತತ್ವಗಳ ಉದ್ದೇಶಗಳನ್ನು ಸಾಕಾರಗೊಳಿಸಲು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ(ಯುಸಿಸಿ)ಅತ್ಯಂತ ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ.
ಮುಸ್ಲಿಂ ಕುಟುಂಬದ ಆಸ್ತಿ ವಿಭಾಗ ದಾವೆಯ ಕುರಿತು ಬೆಂಗಳೂರಿನ ವಿವೇಕನಗರದ ಸಮೀವುಲ್ಲಾ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಹಂಚಾಟೆ ಸಂಜೀವ್ ಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಸಂವಿಧಾನದ ಮೂಲಭೂತ ಅಂಶಗಳಾದ ಪ್ರಜಾಪ್ರಭುತ್ವ, ಏಕತೆ, ಸಮಗ್ರತೆ ಮತ್ತು ಸರ್ವರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಕಾರ್ಯಗತಗೊಳಿಸಲು ಸಂವಿಧಾನದ ಕಲಂ 44ರ ಆಶಯದಂತೆ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕಾಗಿದೆ ಎಂದು ಹೇಳಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಪುರುಷರ ಸಮಾನ ಪಾಲಿಲ್ಲದ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಅಗತ್ಯವಿದೆ. ಸಾಂವಿಧಾನಿಕ ಸಭೆಯ ಚರ್ಚೆ ಉಲ್ಲೇಖಿಸಿರುವ ನ್ಯಾಯಾಲಯ, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಹ ಏಕರೂಪ ನಾಗರಿಕ ಸಂಹಿತೆ ಪರವಾಗಿದ್ದರು. ಪ್ರಮುಖ ನಾಯಕರಾಗಿದ್ದ ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ.ರಾಜೇಂದ್ರ ಪ್ರಸಾದ್, ಟಿ.ಕೃಷ್ಣಮಾಚಾರಿ ಮತ್ತು ಮೌಲಾನಾ ಹಸ್ರತ್ ಮೊಹಾನಿ ಮತ್ತಿತರರೂ ಸಹ ಯುಸಿಸಿಯನ್ನು ಬೆಂಬಲಿಸಿದ್ದರು. ಸಂವಿಧಾನದ ಕಲಂ 44ರಲ್ಲಿ ಏಕರೂಪ ನಾಗರಿಕ ಸಂಹಿತೆ ಪ್ರಸ್ತಾಪವಿದೆ. ಅದನ್ನು ಜಾರಿಗೆ ತಂದರೆ ಮುಸ್ಲಿಂ ಮಹಿಳೆಯರಿಗೂ ಸಮಾನ ನ್ಯಾಯ ಸಿಗಲಿದೆ’ ಎಂದು ಹೇಳಿದೆ.
ಸದ್ಯ ಆಸ್ತಿ ಹಕ್ಕಿನಲ್ಲಿ ಮುಸ್ಲಿಂ ಮಹಿಳೆಯರಿಗೆ ಸಮಾನ ಅಧಿಕಾರವಿಲ್ಲ. ಹಿಂದೂ ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅಧಿಕಾರವಿದೆ. ಹಿಂದೂಗಳಲ್ಲಿ ಅಣ್ಣನ ಸರಿಸಮನಾಗಿ ತಂಗಿಗೆ ಪಾಲಿದೆ. ದೇಶದ ಎಲ್ಲ ಹೆಣ್ಣು ಮಕ್ಕಳೂ ಸಮಾನರು. ಧರ್ಮದ ಕಾರಣದಿಂದಾಗಿ ಮಹಿಳೆಯರ ಹಕ್ಕಿನಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಹಾಗಾಗಿ ಕೇಂದ್ರ, ರಾಜ್ಯ ಸರಕಾರಗಳು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಹಾಗೂ ಹಲವು ಹೈಕೋರ್ಟ್‌ಗಳೂ ಸಹ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ’ ಎಂದು ನ್ಯಾಯಪೀಠ ತನ್ನ 53 ಪುಟಗಳ ತೀರ್ಪಿನಲ್ಲಿ ಹೇಳಿದೆ.