ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹಾತ್ಮ

KDR gandhi
ಕಡೂರು ತಾಪಂನಲ್ಲಿ ಗಾಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಶಾಸಕ ಕೆ.ಎಸ್.ಆನಂದ್,ಪೂರ್ಣಿಮಾ, ದೇವರಾಜ್, ತಿಮ್ಮಯ್ಯ, ರಫೀಕ್ ಇತರರಿದ್ದರು.
Published on

ಕಡೂರು: ಅಹಿಂಸೆ, ಶಾಂತಿ ಹೋರಾಟಗಳ ಮೂಲಕ ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಮಹಾತ್ಮ ಗಾಂಧಿ ಅವರ ಕೊಡುಗೆ ಅಪಾರ. ಆ ಕಾರಣದಿಂದ ಅವರು ರಾಷ್ಟ್ರಪಿತರಾದರು ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ತಾಲೂಕು ಆಡಳಿತ ತಾಪಂನಲ್ಲಿ ಆಯೋಜಿಸಿದ್ದ ಮಹಾತ್ಮಾಗಂಧಿ ಮತ್ತು ಲಾಲ್ ಬಹಾದೂರ್ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ಮಾತನಾಡಿದರು. ಭಾರತಕ್ಕೆ ಸ್ವಾತಂತ್ರ್ಯ ತಂದುಕೊಂಡಲು ಗಾಂಧಿ ಅವರ ಅಹಿಂಸೆ, ಶಾಂತಿ ಹೋರಾಟವೇ ಪ್ರಮುಖ ಕಾರಣ. ಸಿಪಾಯಿದಂಗೆ, ಕಿಲಾಪತ್ ಚಳವಳಿ, ದಂಡಿ ಹೋರಾಟಗಳ ಮೂಲಕ ಬ್ರಿಟಿಷರಿಗೆ ಬಿಸಿ ಮುಟ್ಟಿಸಿದರು. ದೇಶವನ್ನು ಒಗ್ಗಟ್ಟಾಗಿ ಕೊಂಡೊಯ್ಯುವ ನಾಯಕರಾಗಿ ರೂಪುಗೊಂಡರು. ಜೀವನವನ್ನೇ ಸ್ವಾತಂತ್ರೃಸಂಗ್ರಾಮಕ್ಕಾಗಿ ಮುಡಿಪಿಟ್ಟು ವಿಶ್ವಕ್ಕೆ ಪ್ರೇರಣೆಯಾದರು. ದೇಶದ ಯಾವುದೇ ಉನ್ನತ ಹುದ್ದೆಗಳನ್ನು ಅಲಂಕರಿಸದಿದ್ದರೂ ರಾಷ್ಟ್ರಪಿತರಾಗಿ ರಾಷ್ಟ್ರದ ಜನರ ಮನಸ್ಸಿನಲ್ಲಿ ಉಳಿದುಕೊಂಡರು. ಇಂಥ ಮಹಾತ್ಮರನ್ನು ಸ್ಮರಿಸುವುದು ಮತ್ತು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ಗಾಂಧಿ ಅವರ ಜಾತ್ಯತೀತ ಸಿದ್ಧಾಂತವನ್ನು ವಿರೋಧಿಸಿ ಆರ್‌ಎಸ್‌ಎಸ್ ಕಾರ್ಯಕರ್ತ ಗಾಂಧಿ ಅವರನ್ನು ಹತ್ಯೆ ಮಾಡಿದ. ಇಂದಿಗೂ ಸಂಘಟನೆ ಕ್ಷಮೆ ಕೇಳದಿರುವುದು ದೇಶದ ದುರಂತ. ಆ ವ್ಯಕ್ತಿಯನ್ನು ಗಾಂಧಿಗಿಂತ ಹೆಚ್ಚಾಗಿ ಬಿಂಬಿಸುತ್ತಿರುವುದು ದುರಂತ ಎಂದರು.

ದೇಶ ಕಂಡ ಸ್ವಚ್ಛ, ಉತ್ತಮ ಪ್ರಧಾನಿಯಾಗಿ ಆಡಳಿತ ನೀಡಿದ ಲಾಲ್ ಬಹಾದೂರ್ ಶಾಸ್ತ್ರಿ ಅವರ ಜೈ ಜವಾನ್ ಜೈ ಕಿಸಾನ್ ಸಂದೇಶ ಭಾರತವನ್ನೇ ಎಚ್ಚರಿಸಿ ಸೈನಿಕರಿಗೆ ಮತ್ತು ರೈತರ ಪರವಾಗಿ ನಿಂತಿದ್ದನ್ನು ಸ್ಮರಿಸಬೇಕು ಎಂದರು.

ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಮಾತನಾಡಿ, ಗಾಂಧಿ ಅವರ ಆದರ್ಶಗಳನ್ನು ಯುವ ಪೀಳಿಗೆ ಮರೆಯುತ್ತಿದೆ. ಯುವಜನರಲ್ಲಿ ದೇಶಾಭಿಮಾನ, ಕರ್ತವ್ಯಪ್ರಜ್ಞೆ ಹೆಚ್ಚಾಗಿ ಬೆಳೆಯದಿದ್ದರೆ ಮುಂದೆ ಸಂಕಷ್ಟಕ್ಕೆ ದೇಶ ತಿರುಗಬಹುದು ಎಂದರು. ಶಾಸ್ತ್ರಿಜೀ ಅವರು ಪ್ರಧಾನಿಯಾಗಿ ದೇಶದ ಕೈಗಾರಿಕೆೆ, ಕೃಷಿ ಉತ್ಪನ್ನ ಬೆಳೆಯಲು ಒತ್ತು ನೀಡಿದರು. ಜತೆಗೆ ಸೈನಿಕರಿಗೆ ಬಲ ತುಂಬಿದರು ಎಂದರು.

ಶಿಕ್ಷಣ ಸಂಯೋಜಕ ನಾಗರಾಜು ಮಾತನಾಡಿದರು. ಬಿಇಒ ಎಂ.ಎಚ್.ತಿಮ್ಮಯ್ಯ, ತಾಲೂಕು ಬಿಸಿಎಂ ಅಧಿಕಾರಿ ಎಸ್.ಎಸ್.ದೇವರಾಜ್, ಬೀರೂರು ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚೋಪ್ದಾರ್, ಕಂದಾಯ ಇಲಾಖೆಯ ಮಂಜುನಾಥ್, ವೃತ್ತ ನಿರೀಕ್ಷಕ ರಫೀಕ್, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net