ದೇವಸ್ಥಾನಕ್ಕೆ ಅನುದಾನ ಬಿಡುಗಡೆ ವಿವಾದ ಸಲ್ಲ

15MDG2 kumarswamy
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ.
Published on

ಮೂಡಿಗೆರೆ: ಜನಪ್ರತಿನಿಧಿಗಳು ಅಧಿಕಾರದಲ್ಲಿದ್ದಾಗ ಪ್ರಾರ್ಥನಾ ಮಂದಿರಗಳಿಗೆ ವೈಯಕ್ತಿಕ ಹಣ ನೀಡುವುದಿಲ್ಲ. ಬದಲಿಗೆ ಸರ್ಕಾರದ ಅನುದಾನ ಬಿಡುಗಡೆ ಮಾಡಿಸುತ್ತಾರೆ. ಅದರಂತೆ ನಾನು ಕೂಡ ಶಾಸಕನಾಗಿದ್ದ ಅವಧಿಯಲ್ಲಿ ಫಲ್ಗುಣಿ ಗ್ರಾಮದ ಶ್ರೀ ಕಲಾನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ರಥ ನಿರ್ಮಿಸಲು ಮುಜರಾಯಿ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಇದನ್ನು ವಿವಾದ ಮಾಡುವುದು ಸರಿಯಲ್ಲ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.

ಚುನಾವಣೆಯಲ್ಲಿ ನಾನು ಜಯಗಳಿಸಿದರೆ ಫಲ್ಗುಣಿ ದೇವಸ್ಥಾನಕ್ಕೆ ರಥ ನೀಡುವುದಾಗಿ 2018ರಲ್ಲಿ ಹರಕೆ ಮಾಡಿಕೊಂಡಿದ್ದೆ. ಚುನಾವಣೆಯಲ್ಲಿ ಗೆಲುವು ಪಡೆದ ನಂತರ ರಥದ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 40 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಅದರಲ್ಲಿ 25 ಲಕ್ಷ ರೂ. ಟೆಂಡರ್ ಆಗಿತ್ತು. 15 ಲಕ್ಷ ರೂ. ಸರ್ಕಾರಕ್ಕೆ ವಾಪಸಾಗಿದೆ. ರಥ ನಿರ್ಮಾಣಕ್ಕೆ ಹೆಚ್ಚುವರಿ ಹಣವನ್ನು ದಾನಿಗಳು ಮತ್ತು ದೇವಸ್ಥಾನದ ಆಡಳಿತ ಸಮಿತಿಯವರು ಭರಿಸಿದ್ದಾರೆ. ರಥ ನಿರ್ಮಾಣಗೊಂಡು ದೇವಸ್ಥಾನಕ್ಕೆ ಸಮರ್ಪಣೆಗೊಂಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಶಾಸಕನಾಗಿದ್ದಾಗ ಅಂಗಡಿ ಗ್ರಾಮದ ದೇವಸ್ಥಾನಕ್ಕೆ 50 ಲಕ್ಷ ರೂ, ದೇವರುಂದ ದೇವಸ್ಥಾನಕ್ಕೆ 50 ಲಕ್ಷ, ಕಳಸದ ಅಷ್ಟಬ್ರಹ್ಮ ಕಳಸಕ್ಕೆ 50 ಲಕ್ಷ, ಆಲ್ದೂರು ಗಣಪತಿ ದೇವಸ್ಥಾನಕ್ಕೆ 30 ಲಕ್ಷ, ಬೆಟ್ಟಗೆರೆ ಗ್ರಾಮದ ದೇವಸ್ಥಾನಕ್ಕೆ 10 ಲಕ್ಷ ರೂ. ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿಸಿದ್ದೇನೆ ಎಂದು ತಿಳಿಸಿದರು.

ಆಲ್ದೂರಿನ ಗಣಪತಿ ದೇವಸ್ಥಾನ ಇತ್ತೀಚೆಗೆ ಉದ್ಘಾಟನೆಯಾಗಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಶಾಸಕರಾಗಿದ್ದ ಇನ್ನೊಬ್ಬರು ನಮ್ಮ ಜಿಲ್ಲೆಯ ರಾಜಕಾರಣಿ ಕೂಡ ಅನುದಾನ ನೀಡಿದ್ದಾರೆ ಎಂದು ದೇವಸ್ಥಾನ ಉದ್ಘಾಟನೆ ಸಂದರ್ಭದಲ್ಲಿ ಅವರನ್ನು ಸುಪುತ್ರ ಎಂದು ದೇವಸ್ಥಾನ ಸಮಿತಿಯವರು ಬಹಿರಂಗವಾಗಿ ಕರೆದಿದ್ದಾರೆ. ನಾನು ಕೂಡ ಅನುದಾನ ನೀಡಿದ್ದರೂ ನನ್ನ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ತಾರತಮ್ಯವನ್ನು ದೇವರು ಹಾಗೂ ಜನರ ಅಭಿಪ್ರಾಯಕ್ಕೆ ಬಿಡುತ್ತೇನೆ. ಮುಂದೆ ಕೂಡ ಅವಕಾಶ ಸಿಕ್ಕರೆ ಇಂ ಸೇವೆ ಮುಂದುವರಿಸುತ್ತೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net