

ನವದೆಹಲಿ: ಉತ್ತರಾಖಂಡದ ಖತಿಮಾ ವಿಧಾನಸಭಾ ಕ್ಷೇತ್ರದಿಂದ ಸೋತರೂ ಪುಷ್ಕರ್ ಸಿಂಗ್ ಧಾಮಿಯವರನ್ನೇ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಬಿಜೆಪಿ ಹೈಕಮಾಂಡ್ ತೀರ್ವನಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡರು ಧಾಮಿ ಹೆಸರಿಗೆ ಪೂರ್ಣ ಬೆಂಬಲ ನೀಡಿದ್ದಾರೆ. ರಾಜಧಾನಿ ಡೆಹರಾಡೂನ್ನಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಮೀನಾಕ್ಷಿ ಲೇಖಿ ಮತ್ತು ಚುನಾವಣೆ ಉಸ್ತುವಾರಿಯಾಗಿದ್ದ ಪ್ರಲ್ಹಾದ ಜೋಶಿ ಈ ಘೊಷಣೆ ಮಾಡಿದ್ದಾರೆ. ಚುನಾವಣೆಯಲ್ಲೂ ರಾಜ್ಯಾದ್ಯಂತ ಪ್ರವಾಸ ಮಾಡಿದ ಧಾಮಿ ಪಕ್ಷದ ಗೆಲುವಿನಲ್ಲೂ ಪ್ರಮುಖ ಪಾತ್ರವಹಿಸಿದ್ದಾರೆ ಎಂಬುದನ್ನು ಪರಿಗಣಿಸಿ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ.
ಕಳೆದ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಂಡಿದ್ದ ಬಿಜೆಪಿಗೆ ಕೊನೆಯ ಹಂತದಲ್ಲಿ ಧಾಮಿ ವಿವಾದರಹಿತ ಆಡಳಿತ ತಕ್ಕಮಟ್ಟಿಗೆ ತೃಪ್ತಿಕೊಟ್ಟಿತ್ತು. ಮೇಲಾಗಿ, ಸಂಘದ ಹಿನ್ನೆಲೆಯಿರುವುದು ಕೂಡ ಸಂಘಟನೆ ಬಲಗೊಳ್ಳಲು ನೆರವಾಗಿತ್ತು. ಧಾಮಿ ಚುನಾವಣೆಯಲ್ಲಿ ಸೋತಿರುವುದರಿಂದ, ಬಿಜೆಪಿ ಶಾಸಕರೊಬ್ಬರು ರಾಜೀನಾಮೆ ನೀಡಿ ತೆರವುಗೊಳ್ಳಲಿರುವ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಭೆಗೆ ಆಯ್ಕೆಯಾಗಬೇಕಿದೆ.
ಯೋಗಿ ಪ್ರಮಾಣಕ್ಕೆ ತಯಾರಿ: ಯೋಗಿ ಆದಿತ್ಯನಾಥ ಮಾರ್ಚ್ 24ರಂದು ಎರಡನೇ ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸಮಾಜವಾದಿ ಪಕ್ಷದ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್ ಮತ್ತು ಬಿಎಸ್ಪಿ ನಾಯಕಿ ಮಾಯಾವತಿ ಅವರಿಗೂ ಆಹ್ವಾನ ನೀಡಲಾಗಿದೆ. ರಾಜ್ಯದ ಎಲ್ಲಾ 75 ಜಿಲ್ಲೆಗಳ ಕಾರ್ಯಕರ್ತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸುಮಾರು 45 ಸಾವಿರ ಜನ ಸೇರುವ ನಿರೀಕ್ಷೆಯಿದ್ದು, ಮಾ.23ರಂದು ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಮಣಿಪುರ ಮುಖ್ಯಮಂತ್ರಿಯಾಗಿ ಬಿರೇನ್ ಸಿಂಗ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದು, ಐವರು ಶಾಸಕರಾದ ನೇಮ್ಚಾ ಕಿಗ್ಪೆನ್, ಕೇಮ್ಂದ್ ಸಿಂಗ್, ಬಿಸ್ವಜಿತ್ ಸಿಂಗ್, ಅವಾಂಗ್ಬು ನೆವ್ವಾಯ್, ಗೋವಿಂದದಾಸ್ ಕೊಂತುಜಾಮ್ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಪಡೆದರು. ರಾಜ್ಯವನ್ನು ಭ್ರಷ್ಟಾಚಾರಮುಕ್ತ ಮಾಡುವ ಜತೆಗೆ ಡ್ರಗ್ ಮಾಫಿಯಾಕ್ಕೂ ಕಡಿವಾಣ ಹಾಕಲಿದ್ದೇವೆ ಎಂದು ಸಿಎಂ ಬಿರೇನ್ ಸಿಂಗ್ ಭರವಸೆ ನೀಡಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗಿಯಾಗಿದ್ದರು. ಬೀರೇನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಬಿರೇನ್ ಸಿಂಗ್ ಮೊದಲು ಫುಟ್ಬಾಲ್ ಆಟಗಾರರಾಗಿದ್ದರು. ಬಳಿಕ ಗಡಿ ಭದ್ರತಾ ಪಡೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, ‘ನಹರೊಲ್ಗಿ ತೌಡಂಗ್’ ಎಂಬ ಪತ್ರಿಕೆಯ ಸಂಪಾದಕರೂ ಆಗಿದ್ದರು. ಪತ್ರಿಕೋದ್ಯಮ ಪ್ರವೇಶ ಅವರ ರಾಜಕೀಯ ಆಸಕ್ತಿಗೆ ಮುನ್ನುಡಿ ಬರೆದಿತ್ತು. 20 ವರ್ಷಗಳ ಹಿಂದೆ ಅವರು ಮೊದಲ ಬಾರಿಗೆ ರಾಜ್ಯದ ಶಾಸಕರಾಗಿ (ಡೆಮಾಕ್ರಟಿಕ್ ರೆವಲೂಷನರಿ ಪೀಪಲ್ಸ್ ಪಾರ್ಟಿ) ಆಯ್ಕೆಯಾಗಿದ್ದರು.
ಗೋವಾದಲ್ಲಿ ಪ್ರಮೋದ್ ಸಾವಂತ್ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮುಂದುವರಿಸಲು ಬಿಜೆಪಿ ನಾಯಕರು ತೀರ್ವನಿಸಿದ್ದು, ಕೇಂದ್ರದ ವೀಕ್ಷಕರಾದ ನರೇಂದ್ರ ಸಿಂಗ್ ತೋಮರ್, ಮುರುಗನ್, ಚುನಾವಣಾ ಉಸ್ತುವಾರಿಗಳಾಗಿದ್ದ ದೇವೇಂದ್ರ ಫಡ್ನವಿಸ್ ಮತ್ತು ಸಿ.ಟಿ. ರವಿ ಉಪಸ್ಥಿತಿಯಲ್ಲಿ ಈ ಘೋಷಣೆ ಮಾಡಲಾಗಿದೆ. ಚುನಾವಣೆಯಲ್ಲಿ ಸಾವಂತ್ ಹರಸಾಹಸದ ಗೆಲುವು ಸಾಧಿಸಿದ್ದರಿಂದ ಪರ್ಯಾಯ ನಾಯಕರೊಬ್ಬರನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಬೇಕು ಎಂಬ ಚರ್ಚೆಗಳೆದ್ದಿದ್ದವು. ಆದರೆ, ಅಂತಿಮವಾಗಿ ಸಾವಂತ್ರನ್ನೇ ಮುಂದುವರಿಸಲು ಪ್ರಧಾನಿ ಮೋದಿ ನಿರ್ದೇಶಿಸಿದರು ಎಂದು ಹೇಳಲಾಗಿದೆ. ಬಿಜೆಪಿ ಸರ್ಕಾರ ರಚಿಸುವ ಹಕ್ಕು ಮಂಡಿಸಿದ ನಂತರ ಸಾವಂತ್ ಅವರಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ ೖ ಆಹ್ವಾನ ನೀಡಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 92 ಸೀಟುಗಳನ್ನು ಬಾಚಿಕೊಂಡ ಹಿನ್ನೆಲೆಯಲ್ಲಿ, ರಾಜ್ಯಸಭೆಯಲ್ಲಿ ಏಪ್ರಿಲ್ 9ಕ್ಕೆ ಖಾಲಿಯಾಗಲಿರುವ ಎಲ್ಲಾ ಐದೂ ಸೀಟುಗಳು ಆಮ್ ಆದ್ಮಿ ಪಕ್ಷದ ಪಾಲಾಗಿದ್ದು, ಐವರಲ್ಲಿ ಭಾರತ ತಂಡದ ಮಾಜಿ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಆಯ್ಕೆ ಗಮನಸೆಳೆದಿದೆ. ಚುನಾವಣೆ ಸಂದರ್ಭದಲ್ಲಿ ಹರ್ಭಜನ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಣ್ಜಿತ್ ಚನ್ನಿ ಅವರನ್ನು ಭೇಟಿ ಮಾಡಿದ್ದರು ಮತ್ತು ಅವರು ಕಾಂಗ್ರೆಸ್ ಸೇರುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆದರೆ, ಹರ್ಭಜನ್ ಊಹಾಪೋಹಗಳನ್ನು ತಳ್ಳಿಹಾಕಿದ್ದರು. ಆಫ್ಸ್ಪಿನ್ ಬೌಲಿಂಗ್ ಮೂಲಕ ಜನಮನ ಗೆದ್ದಿರುವ ಹರ್ಭಜನ್ಗೆ ಪಂಜಾಬ್ನಲ್ಲೂ ದೊಡ್ಡ ಪ್ರಮಾಣದ ಅಭಿಮಾನಿ ವರ್ಗವಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಅವರನ್ನು ರಾಜ್ಯಸಭೆಗೆ ಕಳುಹಿಸಲಾಗುತ್ತಿದೆ.
ಚುನಾವಣೆಯಲ್ಲಿ ಆಪ್ ಉಸ್ತುವಾರಿಯಾಗಿದ್ದ ದಿಲ್ಲಿ ಶಾಸಕ ರಾಘವ್ ಚಡ್ಡಾ, ದಿಲ್ಲಿ ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್, ಶಿಕ್ಷಣ ತಜ್ಞ ಅಶೋಕ್ ಕುಮಾರ್ ಮಿತ್ತಲ್ ಮತ್ತು ಲೂಧಿಯಾನ ಮೂಲದ ಕೈಗಾರಿಕೋದ್ಯಮಿ, ಕ್ಯಾನ್ಸರ್ ಪೀಡಿತರಿಗೆ ನೆರವಾಗುತ್ತಿರುವ ಸಂಜೀವ್ ಅರೋರಾ ರಾಜ್ಯಸಭೆ ಸದಸ್ಯತ್ವ ಪಡೆಯುತ್ತಿರುವ ಉಳಿದ ನಾಲ್ವರಾಗಿದ್ದಾರೆ. ಐಐಟಿ ಪ್ರೊಫೆಸರ್ ಸಂದೀಪ್ ಪಾಠಕ್ ಕಳೆದ ಮೂರು ವರ್ಷಗಳಿಂದ ರಾಜ್ಯ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಿ, ಕಾರ್ಯತಂತ್ರಗಳನ್ನು ರೂಪಿಸಿದ್ದರು ಎನ್ನಲಾಗಿದೆ. ಈ ಐವರು ಸೋಮವಾರ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಪಂಜಾಬಲ್ಲಿ ಖಾತೆ ಹಂಚಿಕೆ: ಸಚಿವ ಸಂಪುಟದ ಸದಸ್ಯರಿಗೆ ಖಾತೆ ಹಂಚಿಕೆ ಮಾಡಿರುವ ಪಂಜಾಬ್ ಸಿಎಂ ಭಗವಂತ ಸಿಂಗ್ ಮಾನ್, ಗೃಹ ಖಾತೆಯನ್ನು ತಮ್ಮಲ್ಲೇ ಇರಿಸಿಕೊಂಡಿದ್ದಾರೆ. ಹರ್ಪಾಲ್ ಸಿಂಗ್ ಚೀಮಾ ಅವರನ್ನು ಹಣಕಾಸು ಸಚಿವರನ್ನಾಗಿ ನೇಮಿಸಲಾಗಿದೆ. ದಂತ ವೈದ್ಯ, ಶಾಸಕ ಡಾ. ವಿಜಯ್ ಸಿಂಗ್ಲಾಗೆ ಆರೋಗ್ಯ ಖಾತೆ ಮತ್ತು ಏಕೈಕ ಮಹಿಳಾ ಮಂತ್ರಿ ಡಾ. ಬಲ್ಜೀತ್ ಕೌರ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಾಮಾಜಿಕ ಭದ್ರತೆ ಖಾತೆ ನೀಡಲಾಗಿದೆ.