

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೈಸೂರು ನಗರ ವಿಭಾಗದಿಂದ ಮತ್ತು ಎಐ ಇಂಡಿಯಾ ವತಿಯಿಂದ ದೃಷ್ಟಿ ವಿಕಲ ಚೇತನರ ಅನುಕೂಲಕ್ಕಾಗಿ ವಿಶೇಷ ಉಪಕರಣವನ್ನು ಅಳವಡಿಸಿರುವ ಬಸ್ಸುಗಳ ಉದ್ಘಾಟನಾ ಸಮಾರಂಭವನ್ನು ಜು.14 ರಂದು ಮಧ್ಯಾಹ್ನ 1.30ಕ್ಕೆ ನಗರ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ವಿಶೇಷ ಬಸ್‌ಗಳನ್ನು ಸೇವೆಗೆ ಸಮರ್ಪಣೆ ಮಾಡಲಿದ್ದಾರೆ ಎಂದು ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏನಿದು ದಿವ್ಯ ಸ್ಪಂದನ ಯೋಜನೆ?:
ಮೈಸೂರು ನಗರ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರತಿದಿನ ಪ್ರಯಾಣಿಸುವ ದೃಷ್ಟಿ ಇರದ ಪ್ರಯಾಣಿಕರಿಗೆ ಅನುಕೂಲಕಾರಿಯಾಗಿ ದೆಹಲಿಯ ಐಐಟಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದಿವ್ಯ ಸ್ಪಂದನ ವಿಶೇಷ ಉಪಕರಣ ಅಳವಡಿಸಿದೆ.
ಪ್ರತಿದಿನ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ ದೃಷ್ಟಿಹೀನ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ಸಾರಿಗೆ ಸಂಸ್ಥೆ, ದೆಹಲಿಯ ಐಐಟಿ ಸಂಸ್ಥೆ ಹಾಗೂ ಜಿಐಝಡ್ ಇಂಡಿಯಾ ಸಂಸ್ಥೆಯ ಸಹ ಯೋಗದಲ್ಲಿ ದಿವ್ಯ ಸ್ಪಂದನ ಯೋಜನೆಯನ್ನು ನಗರ ಸಾರಿಗೆಯ 200 ಬಸ್‌ಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯು ದೃಷ್ಟಿ ವಿಕಲಚೇತನರು, ಸಾರಿಗೆ ಸಂಸ್ಥೆ ಚಾಲಕ ಹಾಗೂ ನಿರ್ವಾಹಕರಿಗೆ ತರಬೇತಿ ನೀಡುವ ಮೂಲಕ ಯೋಜನೆಯ ಯಶಸ್ವಿಗೆ ರೂಪು-ರೇಷೆ ಸಿದ್ಧಪಡಿಸಿದೆ.
ಭಾರತ ಮತ್ತು ಜರ್ಮನಿ ನಡುವೆ ಆಗಿರುವ ಗ್ರೀನ್ ಅರ್ಬನ್ ಮೊಬಿಲಿಟಿ ಪಾರ್ಟನರ್ಶಿಪ್ ಒಪ್ಪಂದದಂತೆ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜರ್ಮನ್ ಫಂಡಿಂಗ್ ಏಜೆನ್ಸಿಯಾದ ಜಿಐಝಡ್ ಇಂಡಿಯಾ ಸಂಸ್ಥೆಯು ಈ ಯೋಜನೆಗೆ ಆರ್ಥಿಕ ನೆರವು ನೀಡಿದೆ. ಈಗಾಗಲೇ ದೆಹಲಿಯಲ್ಲಿ 20, ಮುಂಬೈ ನಲ್ಲಿ 25 ಹಾಗೂ ಬೆಂಗಳೂರಲ್ಲಿ 100 ಬಿಎಂಟಿಸಿ ಬಸ್‌ಗಳಲ್ಲಿ ಈ ಉಪಕರಣ ಅಳವಡಿಸಲಾಗಿದ್ದು, ದಿವ್ಯಾಂಗಚೇತನರು ಯಾವ ಬಸ್‌ನಲ್ಲಿ ಸಂಚರಿಸಬೇಕು ಎಂಬ ಮಾಹಿತಿ ನೀಡುವ ಮೂಲಕ ಅವರಿಗೆ ನೆರವಾಗುತ್ತದೆ.
400 ದೃಷ್ಟಿಹೀನರಿಗೆ ನೆರವು:
ಮೈಸೂರು ನಗರ ಹಾಗೂ ತಾಲೂಕಿನ ವಿವಿಧೆಡೆ ನಗರ ಸಾರಿಗೆ ಬಸ್‌ಗಳಲ್ಲಿ ಸಂಚರಿಸುವ 400 ದೃಷ್ಟಿಹೀನ ಪ್ರಯಾಣಿಕರನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ. ಈಗಾಗಲೇ ಅವರಿಗೆ ಹಂತಹಂತವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಂಸ್ಥೆಯ ರಾಮ್ ಪ್ರಸಾದ್ ನೇತೃತ್ವದಲ್ಲಿ ತರಬೇತಿ ನೀಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್‌ಆರ್‌ಟಿಸಿ ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್, ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವ 200 ಬಸ್‌ಗಳಲ್ಲಿ ದೃಷ್ಟಿ ಹೀನ ಪ್ರಯಾಣಿಕರಿಗೆ ಧ್ವನಿ ಮೂಲಕ ಮಾಹಿತಿ ನೀಡುವ ಉಪಕರಣ ಅಳವಡಿಸಲಾಗಿದೆ. ಜು.14ರಂದು ಮಧ್ಯಾಹ್ನ 1.30ಕ್ಕೆ ನಗರ ಬಸ್ ನಿಲ್ದಾಣದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ದಿವ್ಯ ಸ್ಪಂದನ ಬಸ್ ಸೇವೆಗೆ ಚಾಲನೆ ನೀಡಲಿದ್ದಾರೆ. ಅಲ್ಲದೆ ಶಕ್ತಿಯೋಜನೆಯಡಿ 500 ಕೋಟಿ(ಬಾರಿ) ಪ್ರಯಾಣಿಕರು ಸಂಚರಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಸಿಹಿ ವಿತರಣೆ ಕಾರ್ಯಕ್ರಮ ಜರುಗಲಿದೆ.