

ಎನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಕರುಗುಂದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಅನುಮಾನಾಸ್ಪದ ಸಾವಿನ ಪ್ರಕರಣವನ್ನು ಭೇದಿಸಿರುವ ಎನ್.ಆರ್.ಪುರ ಪೊಲೀಸರು, ಕೊಲೆ ನಡೆದ 24 ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದರ್ಶನ್ ಪತ್ನಿ ಕಮಲಾ(31), ಶಿವಮೊಗ್ಗದ ಗುರುಪುರದ ಎಸ್.ಶಿವರಾಜ್(35), ಬಿ.ಆರ್.ಹರೀಶ(39), ಬಳ್ಳಾರಿ ಮೂಲದ ಬಿ.ಎಸ್.ಚನ್ನಕೇಶವ(32) ಬಂಧಿತರು.
ಮೇ 24ರಂದು ಕರುಗುಂದ ಬಸ್ ನಿಲ್ದಾಣದಲ್ಲಿ ಸುದರ್ಶನ್ ಎಂಬ ವ್ಯಕ್ತಿ ಶವ ಪತ್ತೆಯಾಗಿತ್ತು. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಸುದರ್ಶನ್ ಮೃತಪಟ್ಟ ಸ್ಥಳದಲ್ಲಿ ಮದ್ಯದ ಪ್ಯಾಕ್ ಬಿದ್ದಿತ್ತು. ಮದ್ಯದ ಪ್ಯಾಕ್ ಸೀಲ್ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು, ಮದ್ಯ ಯಾವ ಅಂಗಡಿಯದ್ದು ಎಂದು ಪತ್ತೆಹಚ್ಚಿ ವೈನ್‌ಶಾಪ್‌ನ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಗಂಡನ ಶವ ಪತ್ತೆಯಾದರೂ ಏನೂ ತಿಳಿಯದಂತಿದ್ದ ಸುದರ್ಶನ್ ಪತ್ನಿ ಕಮಲಾ ಮೇಲೆ ಅನುಮಾನಗೊಂಡಿದ್ದ ಪೊಲೀಸರು ಆಕೆಯನ್ನು ತನಿಖೆಗೊಳಪಡಿಸಿದರು. ಪತಿ ಸುದರ್ಶನ್ ಪ್ರತಿನಿತ್ಯ ಕುಡಿದುಬಂದು ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳ ತಾಳಲಾರದೆ ಅನೈತಿಕ ಸಂಪರ್ಕ ಹೊಂದಿದ್ದ ಶಿವರಾಜ್‌ಗೆ ಕರೆ ಮಾಡಿ ಗಂಡನನ್ನು ಮುಗಿಸುವಂತೆ ಹೇಳಿದ್ದಳು. ನಂತರ ಶಿವರಾಜ್ ತನ್ನ ಸ್ನೇಹಿತ ಹರೀಶ್‌ಗೆ ಸಹಾಯ ಕೇಳಿದ. ಹರೀಶನು ಬಳ್ಳಾರಿಯ ಚೆನ್ನಕೇಶವ ಎಂಬುವವನಿಗೆ ಸುದರ್ಶನ್ ಕೊಲೆ ಮಾಡಲು ಸಹಕಾರ ಮಾಡಿದರೆ ಹಣ ನೀಡುವುದಾಗಿ ತಿಳಿಸಿದ್ದಾನೆ. ಹೀಗೆ ಮೂವರೂ ಸೇರಿ ಶನಿವಾರ ಶಿವಮೊಗ್ಗದಿಂದ ಎನ್.ಆರ್.ಪುರಕ್ಕೆ ಬಂದಿದ್ದಾರೆ.
ಕುತ್ತಿಗೆ ಹಿಸುಕಿ ಹತ್ಯೆ: ಮಡಬೂರಿನ ತನ್ನ ಸ್ನೇಹಿತನ ಕಾರನ್ನು ಪಡೆದುಕೊಂಡು ಶನಿವಾರ ರಾತ್ರಿ ಮೂವರೂ ಸೇರಿಕೊಂಡು ಸುದರ್ಶನ್‌ಗೆ ಕರೆ ಮಾಡಿ ಮನೆ ಸಮೀಪದ ದೇವಸ್ಥಾನಕ್ಕೆ ಬಾ ಎಂದು ತಿಳಿಸಿದ್ದಾರೆ. ನಂತರ ಸುದರ್ಶನ್‌ನನ್ನು ಕರೆದುಕೊಂಡು ಮೆಣಸೂರು ಬೈಪಾಸ್‌ನಲ್ಲಿ ಮದ್ಯ ಖರೀದಿಸಿ ಕರುಗುಂದ ಬಸ್ ನಿಲ್ದಾಣಕ್ಕೆ ಹೋಗುತ್ತಾರೆೆ. ಅಲ್ಲಿ ಎಲ್ಲರೂ ರಾತ್ರಿಯವರೆಗೆ ಮದ್ಯ ಸೇವಿಸುತ್ತಾರೆ. ನಂತರ 10 ನಿದ್ದೆ ಮಾತ್ರೆಗಳನ್ನು ಮದ್ಯಕ್ಕೆ ಬೆರೆಸಿ ಸುದರ್ಶನ್‌ಗೆ ಕೊಡುತ್ತಾರೆ. ಸುದರ್ಶನ್ ಮದ್ಯ ಸೇವಿಸಿದ ನಂತರ ಪ್ರಜ್ಞೆ ತಪ್ಪುತ್ತಿದ್ದಂತೆ ಕುತ್ತಿಗೆ ಹಿಸುಕಿ ಸಾಯಿಸಿದ್ದಾರೆ.