

ಮನೋಹರ ಬಳಂಜ ಬೆಳ್ತಂಗಡಿ
ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೂಂಬೆಟ್ಟು ಬಳಿ ಮೃತ್ಯುಂಜಯ ಹೊಳೆಗೆ 20 ವರ್ಷ ಹಿಂದೆ ನಿರ್ಮಿಸಿದ್ದ ತೂಗುಸೇತುವೆ ನಿರ್ವಹಣೆಯಿಲ್ಲದೆ ಅಪಾಯದಲ್ಲಿದೆ.
ಈ ತೂಗುಸೇತುವೆಗೆ 1999-2000ರಲ್ಲಿ ಚಿಕ್ಕಮಗಳೂರು ಸಂಸದರಾಗಿದ್ದ ಶ್ರೀಕಂಠಪ್ಪ 3 ಲಕ್ಷ ರೂ., ಶಾಸಕರಾಗಿದ್ದ ಪ್ರಭಾಕರ ಬಂಗೇರ 1 ಲಕ್ಷ ರೂ. ಅನುದಾನ ಒದಗಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 1.50 ಲಕ್ಷ ರೂ., ಸ್ಥಳೀಯಾಡಳಿತ ಮತ್ತು ರೋಟರಿ ಸಂಸ್ಥೆ ಬೆಳ್ತಂಗಡಿ ಸಹಕಾರದೊಂದಿಗೆ ಒಟ್ಟು 12 ಲಕ್ಷ ರೂ. ಸಹಾಯಧನದಲ್ಲಿ 130 ಅಡಿ ಉದ್ದ 6 ಅಡಿ ಅಗಲದ ತೂಗುಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಕಡಿರುದ್ಯಾವರ, ಚಾಮುಂಡಿನಗರದಿಂದ ಮುಂಡಾಜೆಗೆ ಹೋಗುವ ಹೈನುಗಾರರಿಗೆ, ಆಸ್ಪತ್ರೆಗೆ ತೆರಳಲು, ದಿನಬಳಕೆ ಸಾಮಗ್ರಿ ತರಲು ಅನುಕೂಲವಾಗಿದೆ. ಕಡಿರುದ್ಯಾವರ, ಕಾನರ್ಪ ರಸ್ತೆಯಿಂದ ಕಕ್ಕಿಂಜೆ, ಚಾರ್ಮಾಡಿಗೆ ನಡೆದು ಸಾಗುವವರಿಗೆ 4 ಕಿ.ಮೀ. ಉಳಿತಾಯವಾಗುತ್ತದೆ.
ಮರ ಬಡಿದು ಹಾನಿ: ಕಳೆದ ಬಾರಿಯ ಪ್ರವಾಹಕ್ಕೆ ಮೃತ್ಯುಂಜಯ ಹೊಳೆ ಉಕ್ಕಿ ಹರಿದ ಪರಿಣಾಮ ಬೃಹತ್ ಮರ ಬಡಿದು ತೂಗುಸೇತುವೆಗೆ ಹಾನಿ ಉಂಟಾಗಿತ್ತು. ಬಳಿಕ ಶಾಸಕರು ಹಾಗೂ ಸ್ಥಳಿಯಾಡಳಿತ ಸಹಾಯದಿಂದ 1.30 ಲಕ್ಷ ರೂ. ಬಳಸಿ ದುರಸ್ತಿಪಡಿಸಲಾಗಿತ್ತು. ಸೇತುವೆಗೆ 5 ಟನ್ ಭಾರ ಹೊರುವ ಸಾಮರ್ಥ್ಯವಿದ್ದರೂ ಗ್ರೀಸಿಂಗ್, ಪೇಂಟಿಂಗ್‌ನ ನಿರ್ವಹಣೆಯಿಲ್ಲದೆ ಅಪಾಯದಂಚಿನಲ್ಲಿದೆ. ತಳಭಾಗದ ಕಬ್ಬಿಣದ ಸರಳುಗಳು ತುಕ್ಕು ಹಿಡಿಯುತ್ತಿವೆ. ಸೇತುವೆಯನ್ನು ಎತ್ತಿ ತೂಗಿರುವ ಎರಡು ರೋಪ್‌ಗಳು ಸಾಮರ್ಥ್ಯ ಕಳೆದುಕೊಳ್ಳುತ್ತಿವೆ.
ಪ್ರಮುಖ ಸಂಪರ್ಕ ಸೇತು: ದೂಂಬೆಟ್ಟು ಸಮೀಪ ಪರಿಶಿಷ್ಟ ವರ್ಗಕ್ಕೆ ಸೇರಿದ 20 ಮನೆಗಳಿವೆ. ಕಾನರ್ಪ, ಕಡಿರುದ್ಯಾವರ, ಮುಂಡಾಜೆಗೆ ಅಗತ್ಯ ಸಂಪರ್ಕ ಕಲ್ಪಿಸುವ ರಸ್ತೆಯಾದ್ದರಿಂದ ಕೃಷಿಕರಿಗೆ, ಹೈನುಗಾರರಿಗೆ, ಕೃಷಿ ಗೊಬ್ಬರ ಸಾಗಾಟಕ್ಕೆ, ಆರೋಗ್ಯ ಕೇಂದ್ರಕ್ಕೆ ತೆರಳಲು, ಶಾಲಾ ಮಕ್ಕಳಿಗೆ, ಕೂಲಿ ಕೆಲಸಕ್ಕೆ ತೆರಳಲು ಅಗತ್ಯ ಸಂಪರ್ಕ ರಸ್ತೆ. ಕಡಿರುದ್ಯಾವರ ಮುಖ್ಯ ರಸ್ತೆಯಿಂದ 2 ಕಿ.ಮೀ. ದೂರವಿದ್ದು, ಈಗಾಗಲೇ 25 ಲಕ್ಷ ರೂ. ಕಾಂಕ್ರೀಟ್ ಕಾಮಗಾರಿ ನಡೆಸಲಾಗಿದೆ. ಉಳಿದಂತೆ 1 ಕಿ.ಮೀ.ನಷ್ಟು ಕಾಂಕ್ರೀಟ್ ಕಾಮಗಾರಿ ನಡೆಯಬೇಕಿದೆ. ದೂಂಬೆಟ್ಟು ಪರಿಸರದಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಕ್ಕೆ ಜನ ಬೇಡಿಕೆ ಇಟ್ಟಿದ್ದಾರೆ.
20 ವರ್ಷಗಳ ಹಿಂದೆ ನಿರ್ಮಾಣವಾದ ತೂಗುಸೇತುವೆ ಅಪಾಯದಲ್ಲಿದೆ. ನೂತನ ಸೇತುವೆ ಹಾಗೂ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಕೃಷಿಗೆ ನೀರು ಲಭ್ಯವಾಗುವುದರೊಂದಿಗೆ ಓಡಾಟಕ್ಕೂ ಅನುಕೂಲ. ಶಶಿಧರ್ ಎಸ್.ಖಾಡಿಲ್ಕರ್ ದೂಂಬೆಟ್ಟು, ಕೇತಕ್ ಕುಂಜ್ ನಿವಾಸಿ ಪ್ರವಾಹದಲ್ಲಿ ಹಾನಿಗೀಡಾದ ತಾಲೂಕಿನ ತೂಗುಸೇತುವೆಗಳ ದುರಸ್ತಿ ಕಾರ್ಯ ಒಮ್ಮೆ ನಡೆದಿದೆ. ದೂಂಬೆಟ್ಟು ಸೇತುವೆ ಪರಿಶೀಲಿಸಿ ಅವಶ್ಯ ಕಂಡಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಅನುದಾನ ತರಲು ಪ್ರಯತ್ನಿಸಲಾಗುವುದು. ಮುಗೇರಡ್ಕದಲ್ಲಿ ಸೇತುವೆ ಜತೆಗೆ ನೀರಿನ ಕೊರತೆ ನೀಗಿಸುವ ಸಲುವಾಗಿ ನೂತನ ಯೋಜನೆ ಹಮ್ಮಿಕೊಳ್ಳಲಾಗಿದೆ. ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ