

ಬಾಳೆಹೊನ್ನೂರು: ದುಶ್ಚಟಕ್ಕೆ ದಾಸರಾದರೆ ಬದುಕು ದುಸ್ತರವಾಗಲಿದ್ದು ದುಶ್ಚಟದಿಂದ ಹೊರಬರುವುದು ಕಷ್ಟ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಸಂಗಮೇಶ್ವರಪೇಟೆ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಖಾಂಡ್ಯ ವಲಯದಿಂದ ಆಯೋಜಿಸಿದ್ದ ನವಜೀವನ ಜಾಥಾ ಹಾಗೂ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಾನೂನು ಎಷ್ಟೇ ಕಠಿಣವಾಗಿದ್ದರೂ ಕಣ್ಣುತಪ್ಪಿಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ಬದುಕಿನಲ್ಲಿ ಮಹಾತ್ಮ ಗಾಂಧೀಜಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಚಿಂತನೆ ಸಮಯೋಚಿತವಾಗಿದೆ ಎಂದರು.
ಉಜ್ಜಿಯಿನಿ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಧರ್ಮಾಧಿಕಾರಿ ಯು.ಸಿ.ಗೋಪಾಲ ಗೌಡ ಮಾತನಾಡಿ, ನವಜೀವನ ಸಮಿತಿ ಸದಸ್ಯರ ಸೇವೆ ಶ್ಲಾಘನೀಯ. ಮಾದಕಮುಕ್ತ ಕರ್ನಾಟಕ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡ ಸದಸ್ಯರಿಗೆ ಅಭಿನಂದನೆ ತಿಳಿಸುವುದು ನಮ್ಮ ಕರ್ತವ್ಯ ಎಂದರು.
ಮೂಡಿಗೆರೆ ಯೋಜನಾಧಿಕಾರಿ ಸುಧೀರ್ ಜೈನ್ ಮಾತನಾಡಿ, ದುಶ್ಚಟದಿಂದ ಕುಟುಂಬ ಕಲಹ, ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಿದರು. ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್‌ಕುಮಾರ್, ಸಂಪನ್ಮೂಲ ವ್ಯಕ್ತಿ ಪ್ರಶಾಂತ್ ಚಿಪ್ರಗುತ್ತಿ, ಹುಯಿಗೆರೆ ಗಿರೀಶ್, ಪ್ರಮುಖರಾದ ಕೆ.ಎಸ್.ಗಣೇಶ್, ಕವಿತಾ ಲಿಂಗರಾಜ್, ಬಿಂದು, ಹೇಮಾವತಿ, ಪೂರ್ಣೇಶ್, ಆಲೋನ್ಸ್, ವೀಣಾ, ಬಿ.ಸಿ.ರತ್ನಾಕರ ಮತ್ತಿತರರಿದ್ದರು.