ದುರ್ಬಳಕೆ ನಿಯಂತ್ರಣಕ್ಕೆ ಕಠಿಣ ನಿಯಮ

CTD -------------
format: 0; filter: 0; fileterIntensity: 0.0; filterMask: 0; captureOrientation: 0; runfunc: 0; algolist: 0; multi-frame: 1; brp_mask:0; brp_del_th:0.0000,0.0000; brp_del_sen:0.0000,0.0000; motionR: 1; delta:1; bokeh:1; module: photo;hw-remosaic: false;touch: (0.49714318, 0.6265474);sceneMode: 12582912;cct_value: 0;AI_Scene: (-1, -1);aec_lux: 148.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 36;
Published on

ಚಿತ್ರದುರ್ಗ: ಮಾನವ ಹಕ್ಕುಗಳ ಉಲ್ಲಂಘನೆ ದೂರಿನೊಂದಿಗೆ ಕಚೇರಿಗೆ ಬರುವ ಸಾರ್ವಜನಿಕರ ಜತೆ ಸೌಜನ್ಯದಿಂದ ವರ್ತಿಸುವಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್‌ಭಟ್ ಸೂಚಿಸಿದರು.

ಜಿಪಂದಲ್ಲಿ ಗುರುವಾರ ಜಿಲ್ಲೆಯ ಪ್ರಕರಣಗಳ ವಿಚಾರಣೆ ನಡೆಸಿ ಮಾತನಾಡಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಕಚೇರಿ ಬೆಂಗಳೂರಲ್ಲಿದ್ದು, ಜಿಲ್ಲಾ ಮಟ್ಟದಲ್ಲಿ ಕಚೇರಿಗಳಿಲ್ಲ. ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೇ ಮಾನವ ಹಕ್ಕುಗಳ ಸಂರಕ್ಷಕರಾಗಿದ್ದಾರೆ. ಜನರಿಗೆ ಸೇವೆ ಸೌಲಭ್ಯಗಳನ್ನು ಸಕಾಲದಲ್ಲಿ ತಲುಪಿಸಬೇಕು. ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸಬಾರದು ಎಂದರು.

ಆಯೋಗದ ಹೆಸರು ದುರ್ಬಳಕೆ ಮಾಡಿಕೊಂಡು ವಿವಿಧ ಸಂಘಟನೆಗಳು ಅಧಿಕಾರಿಗಳನ್ನು ಬೆದರಿಸುವ ದೂರುಗಳಿವೆ. ನಿಯಂತ್ರಣಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕಠಿಣ ನಿಯಮಗಳನ್ನು ರೂಪಿಸಿದೆ. ಮಾನವ ಹಕ್ಕುಗಳ ಹೆಸರಿನ ಸಂಘಟನೆಗಳು ಸಲ್ಲಿಸುವ ದೂರುಗಳನ್ನು ಆಯೋಗ ಸ್ವೀಕರಿಸುವುದಿಲ್ಲ.ಬಾಧಿತರು ನೇರ ನೀಡಿದರೆ ದೂರು ದಾಖಲಿಸುತ್ತೇವೆ. ಪತ್ರಿಕಾ ವರದಿಗಳನ್ನಾಧರಿಸಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುವುದು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳವನ್ನು ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ದೊರಕುತ್ತವೆ. ಇಂತಹ ಹಕ್ಕುಗಳಲ್ಲಿ ಅತಿ ಮುಖ್ಯವಾದವುಗಳನ್ನು ಸಂವಿಧಾನದಲ್ಲಿ ಮೂಲ ಹಕ್ಕುಗಳೆಂದು ಹೆಸರಿಸಿ, ಕಾನೂನಿನ ರಕ್ಷಣೆ ಒದಗಿಸಲಾಗಿದ್ದು, ಉಲ್ಲಂಘನೆಯಾದರೆ ನ್ಯಾಯಾಲಯದ ಮೊರೆ ಹೋಗಿ ಸಂರಕ್ಷಿಸಿಕೊಳ್ಳಬಹುದು. ಇದರ ಹೊರತಾಗಿ ಮಾನವ ಹಕ್ಕುಗಳ ಉಲಂಘನೆಯಾದರೆ ಆಯೋಗಕ್ಕೂ ದೂರು ಸಲ್ಲಿಸಬಹುದೆಂದರು.

ಆಯೋಗದ ಅಧ್ಯಕ್ಷರ ಆಪ್ತ ಕಾರ‌್ಯದರ್ಶಿ ಅರುಣ್‌ಪೂಜಾರ್, ಡಿಸಿ ಟಿ.ವೆಂಕಟೇಶ್, ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಎಡಿಸಿಬಿ.ಟಿ.ಕುಮಾರಸ್ವಾಮಿ ಇದ್ದರು.

ವಿವಿಧೆಡೆ ಭೇಟಿ

ಶ್ಯಾಮ್‌ಭಟ್ ಹಾಗೂ ಎಸ್.ಕೆ.ವಂಟಿಗೋಡಿ ಅವರ ತಂಡ ನಗರದ ಜಿಲ್ಲಾಸ್ಪತ್ರೆ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯಗ ಳು, ಜಿಲ್ಲಾ ಕಾರಾಗೃಹ, ನಗರ ಠಾಣೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಜಿಲ್ಲಾಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ, ಪುರುಷರ ಜನರಲ್ ವಾರ್ಡ್ ಪರಿಶೀಲಿಸಿ ಮಾಹಿತಿ ಪಡೆಯಿತು. ಅವಧಿ ಮೀರಿದ ಔಷಧ ಇವೆಯೇ ಎಂದು ಪರಿಶೀಲಿಸಲಾಯಿತು. ಶಸ್ತ್ರಚಿಕಿತ್ಸೆ ವಿವರಗಳನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ತಿಳಿಸಿದರು. ಡಿಎಚ್‌ಒ ಡಾ.ಜಿ.ಪಿ.ರೇಣು ಪ್ರಸಾದ್ ಇದ್ದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಡಾ.ಬಿ.ಆರ್.ಅಂಬೇ ಡ್ಕರ್ ಸರ್ಕಾರಿ ಕಾಲೇಜು ಬಾಲಕಿಯರ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿ ನಿಲಯ ಹಾಗೂ ವೃತ್ತಿಪರ ಮೆಟ್ರಿಕ್ ನಂತರ ವಿದ್ಯಾರ್ಥಿನಿಲಯಗಳಿ ಗೆ ಭೇಟಿ ನೀಡಿದ ತಂಡ ಸೌಲಭ್ಯಗಳನ್ನು ಪರಿಶೀಲಿಸಿತು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಇತರರು ಇದ್ದರು. ಜಿಲ್ಲಾ ಕಾರಾಗೃಹಕ್ಕೂ ತಂಡ ಭೇಟಿ ನೀಡಿತು. ಸಿದ್ದರಾಮ ಬಿ.ಪಾಟೀಲ್ ಇದ್ದರು.

ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಅವಧಿ ಮೀರಿದ ದಿನಾಂಕವಿರುವ ತಂಪು ಪಾನೀಯ ಮಾರಾಟದ ವಿರುದ್ಧ ಕ್ರಮಕ್ಕೆ ಸೂಚಿಸಿದರು. ಕ್ಯಾಂಟಿನ್‌ನಲ್ಲಿ ಕುಡಿಯುವ ನೀರು, ಆಹಾರ ಪರಿಶೀಲನೆ ನಡೆಸಿದರು. ಎಸಿ ಮೆಹಬೂಬ್ ಜೀಲಾನಿ ಖುರೇಷಿ, ಡಿವೈಎಸ್‌ಪಿ ಪಿ.ಕೆ.ದಿನಕರ್ ಇದ್ದರು.

----

ಆಯೋಗದಲ್ಲಿ 2900ಕ್ಕೂ ಹೆಚ್ಚು ಪ್ರಕರಣಗಳ ಬಾಕಿ

ಚಿತ್ರದುರ್ಗ: ರಾಜ್ಯ ಮಾನವ ಹಕ್ಕುಗಳ ಆಯೋಗದ ಹಿಂದಿನ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಫೆಬ್ರವರಿ 2023 ಅಂತ್ಯವಾಗಿತ್ತು. ವಿಧಾನ ಸಭೆ ಚುನಾವಣೆ ನಂತರ ನವೆಂಬರ್‌ನಲ್ಲಿ ಆಯೋಗಕ್ಕೆ ಹೊಸಬರ ನೇಮಕವಾಗಿದ್ದು, ಆಯೋಗ ಕಾರ‌್ಯಾಚರಣೆಗೆ ತೊಡಕಾಗಿತ್ತು ಎಂದು ಹಂಗಾಮಿ ಅಧ್ಯಕ್ಷ ಟಿ.ಶ್ಯಾಮ್‌ಭಟ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಕಿ ಸೇರಿ ಈವರೆಗೆ 12000 ಕ್ಕೂ ಅಧಿಕ ಪ್ರಕರಣಗಳು ವಿಲೇ ಆಗಿವೆ. 2900ಕ್ಕೂ ಹೆಚ್ಚು ಪ್ರಕರಣಗಳ ಇತ್ಯರ್ಥ ಬಾಕಿಯಿದೆ ಎಂದರು.

ಹೊಸದಾಗಿ ಅಧ್ಯಕ್ಷರಾಗಿದ್ದ ನಿವೃತ್ತ ನ್ಯಾ.ಎಲ್.ನಾರಾಯಣಸ್ವಾಮಿ ಅವರು ಲೋಕಪಾಲ್ ಸಂಸ್ಥೆ ಸದಸ್ಯರಾಗಿ ನೇಮಕವಾದ ಕಾರಣ ನಾನು ಹಂಗಾಮಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ವಿಚಾರಣೆಗೆ ಅಧಿಕಾರಿಗಳು, ಸಾರ್ವಜನಿಕರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಲು ಆಯೋಗವೇ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದು, 18 ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಾಗಿದೆ ಎಂದರು.

ಸಾರ್ವಜನಿಕರು ಸ್ವತಃ, ಆನ್‌ಲೈನ್ ಅಥವಾ ರಿಜಿಸ್ಟರ್ ಅಂಚೆ ಮೂಲಕ ದೂರು ಸಲ್ಲಿಸಬಹುದು. ಚಿತ್ರದುರ್ಗ ಜಿಲ್ಲೆಯ 13 ಪ್ರಕರಣಗಳ ಪೈಕಿ 4 ಕ್ಕೆ ವರದಿಗಳು ಬರಬೇಕಿದೆ. ಮೈಕ್ರೋಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಕೆಲ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲು ಮಾಡಿಕೊಳ್ಳಲಾಗಿದೆ. ಚಿತ್ರದುರ್ಗದಲ್ಲಿ ಇಂಥ ಪ್ರಕರಣ ವರದಿಯಾಗಿಲ್ಲ.

ಜಿಲ್ಲಾಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆ ಅಧಿಕವಾಗಿರುವ ಹಾಗೂ ಚಿತ್ರದುರ್ಗದಲ್ಲಿ ನಡೆದಿದ್ದ ಬಿಜೆಪಿ ಮುಖಂಡ-ನಗರ ಠಾಣೆ ಪಿಎಸ್‌ಐ ನಡುವಿನ ಜಟಾಪಟಿಗೆ ಸಂಬಂಧಿಸಿದಂತೆ ಪ್ರತಿ ದೂರು ದಾಖಲಿಸದ ಬಗ್ಗೆ ಪೊಲೀಸರಿಂದ ವರದಿ ಪಡೆಯುವುದಾಗಿ ಹೇಳಿದರು.

ಸದಸ್ಯ ಎಸ್.ಕೆ.ವಂಟಿಗೋಡಿ ಅವರು ಮಾತನಾಡಿ, ನವೆಂಬರ್ 2023 ರಿಂದ ಈಚೆಗೆ ಆಯೋಗದಿಂದ ಇತ್ಯರ್ಥಪಡಿಸಿದ ಪ್ರಕರಣಗಳಲ್ಲಿ 2.40 ಕೋಟಿ ರೂ.ಪರಿಹಾರ ಧನವನ್ನು ಸರ್ಕಾರದಿಂದ ಬಾಧಿತರಿಗೆ ಕೊಡಿಸಲಾಗಿದೆ. ಈ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದ ವಸೂಲಿ ಮಾಡಲು ಸೂಚಿಸಲಾಗಿದೆ ಎಂದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net