ದುರ್ಗದಲ್ಲಿ ಭುಗಿಲೆದ್ದ ದಲಿತರ ಆಕ್ರೋಶ

Swabhimani
Published on

ಚಿತ್ರದುರ್ಗ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕೋಟೆನಗರಿಯಲ್ಲಿ ಶುಕ್ರವಾರ ಶಾಂತಿಯುತವಾಗಿ ನಡೆಯುತ್ತಿದ್ದ ದಲಿತ ಸಮುದಾಯದವರ ಪ್ರತಿಭಟನೆ ಇದ್ದಕ್ಕಿಂದ್ದಂತೆ ತೀವ್ರ ಸ್ವರೂಪ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಮಾದಿಗ ಮಹಾಸಭಾ ನೀಡಿದ್ದ ಕರೆಯ ಮೇರೆಗೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಮಾದಿಗ ಸಮುದಾಯದವರು ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಒಂದು ಹಂತದಲ್ಲಿ ಬ್ಯಾರಿಕೇಡ್‌ಗಳನ್ನು ಉರುಳಿಸಿ ಜಿಲ್ಲಾಧಿಕಾರಿ ಕಚೇರಿಯತ್ತ ದೌಡಾಯಿಸಿದರು.

ಡಿಸಿ ಕಚೇರಿಯ ಮೆಟ್ಟಿಲುಗಳನ್ನು ಏರಿ, ಚೇಂಬರ್ ಒಳಗೆ ನುಗ್ಗಲು ಪ್ರಯತ್ನಿಸಿದಾಗ ಪೊಲೀಸರು ತಡೆದರು. ತಳ್ಳಾಟ, ನೂಕಾಟ ಕೂಡ ನಡೆಯಿತು. ಪ್ರತಿಭಟನಾಕಾರರನ್ನು ಎಳೆದು ಕೆಳಗಿಳಿಸಲು ಮುಂದಾದರು. ಪ್ರತಿಭಟನಾಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.

ಪೊಲೀಸ್ ಇಲಾಖೆಯ ಮೇಲೆ ಗೌರವವಿದೆ. ಆದರೆ, ಮಾದಿಗ ಸಮುದಾಯದವರ ಹೋರಾಟ ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾದರೆ, ಪೊಲೀಸರು ಎಂಬುದನ್ನು ಲೆಕ್ಕಿಸದೆ ಜೈಲಿಗೆ ಹೋಗಲು ಹಿಂಜರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರು ಅಸಹಾಯಕರಾಗಿ ನಿಲ್ಲಬೇಕಾಯಿತು.

ಸುಪ್ರೀಂಕೋರ್ಟ್ ತೀರ್ಪು ನೀಡಿ ಆ. 1ಕ್ಕೆ ವರ್ಷವಾದರೂ ಸಿಎಂ ಸಿದ್ದರಾಮಯ್ಯ ಒಳಮೀಸಲು ಜಾರಿಗೆ ಮುಂದಾಗಿಲ್ಲ. ಅವರು ಹೆಸರಿಗಷ್ಟೇ ಅಹಿಂದ ನಾಯಕ. ದಲಿತ ಸಮುದಾಯದವರ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಸ್ವೀಕರಿಸಲು ಬಂದರೂ ಜಿಲ್ಲಾಧಿಕಾರಿಯೇ ಬರುವಂತೆ ಪಟ್ಟು ಹಿಡಿದರು. ಬರದಿದ್ದರೆ, ಸ್ಥಳದಿಂದ ಕದಲುವುದಿಲ್ಲ. ಇಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಎಚ್ಚರಿಸಿದರು. ಅರೆಬೆತ್ತಲೆ ಪ್ರತಿಭಟನೆಗೂ ಮುಂದಾದರು. ಕೊನೆಗೆ ಡಿಸಿ ವೆಂಕಟೇಶ್ ಅವರೇ ಬಂದರು. ಸಮುದಾಯದವರೊಟ್ಟಿಗೆ ನೆಲದ ಮೇಲೆ ಕೂತು ಅಹವಾಲು ಸ್ವೀಕರಿಸುವಂತೆ ಪಟ್ಟು ಹಿಡಿದರು. ನಿಮ್ಮ ಮನವಿ ಸರ್ಕಾರಕ್ಕೆ ರವಾನಿಸುತ್ತೇನೆಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net