ದುರಸ್ಥಿಗೊಳ್ಳದ ಮುದುವಾಡಿ ಕೆರೆಕೋಡಿ / ಕೋಡಿಬೀಳುವ ಹಂತದಲ್ಲಿರುವ ಮುದುವಾಡಿ ದೊಡ್ಡಕೆರೆ / ತುರ್ತಾಗಿ ಆಗಬೇಕಾಗಿದೆ ಕೋಡಿ ರಸ್ತೆ ದುರಸ್ಥಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೋಲಾರ ಶ್ರೀನಿವಾಸಪುರ ರಸ್ತೆಯಲ್ಲಿರುವ ಮುದುವಾಡಿ ದೊಡ್ಡಕೆರೆ ತುಂಬಿದ್ದು, ಕೋಡಿ ಹರಿಯುವುದು ಮಾತ್ರ ಬಾಕಿ ಇದ್ದು, ಮಳೆ ಹೆಚ್ಚಾದರೆ ಒಂದೆರಡು ದಿನಗಳಲ್ಲಿ ಕೋಡಿ ಹರಿಯುವ ಸಾಧ್ಯತೆ ಇದೆ. ಕೋಡಿ ದುರಸ್ಥಿ ಕಾರ್ಯ ನೆನಗುದಿಗೆ ಬಿದ್ದಿದೆ.

ಮುದುವಾಡಿ ದೊಡ್ಡಕೆರೆ ಕೆ.ಸಿ.ವ್ಯಾಲಿ ನೀರು ತುಂಬಿದ್ದು, ಇನ್ನೇನು ಕೋಡಿ ಹರಿಯುವ ಹಂತಕ್ಕೆ ತಲುಪಿದೆ. ಕೋಲಾರ ಶ್ರೀನಿವಾಸಪುರ ಪ್ರಮುಖ ರಸ್ತೆ ಕೆರೆ ಕೋಡಿಯ ಮೇಲೆ ಹಾದುಹೋಗುತ್ತದೆ. ಕಳೆದ ೨ ವರ್ಷಗಳ ಹಿಂದೆ ಕೆರೆಕೋಡಿ ಬಿದ್ದ ಸಂದರ್ಭದಲ್ಲಿ ರಸ್ತೆ ಹಳ್ಳಗಳು ಬಿದ್ದ ಕಾರಣ ಬಸ್ಸುಗಳು ಮತ್ತು ದ್ವಿಚಕ್ರವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋಡಿಯ ಮೇಲೆ ಒಂದು ಅಡಿಯಷ್ಟು ನೀರು ಹರಿಹುತ್ತಿತ್ತು. ಅದೇ ರಸ್ತೆಯ ಮೇಲೆ ಬಸ್ಸು ಮತ್ತು ವಾಹನ ಸಂಚಾರ ಮಾಡುತ್ತಿದ್ದವು.

ಮುದುವಾಡಿ ದೊಡ್ಡಕೆರೆಗೆ ೨ ಕೋಡಿಗಳು ಇದ್ದು, ಒಂದು ಕೋಡಿ ಮೇಲೆ ಪ್ಲೇಓವರ್ ನಿರ್ಮಾಣವಾಗಿದೆ. ಇನ್ನೊಂದು ಕೋಡಿ ಮೇಲೆಯೂ ಪ್ಲೇಓವರ್ ನಿರ್ಮಾಣವಾಗಬೇಕಾಗಿತ್ತು. ಸದರಿ ಕೋಡಿಯ ಮೇಲೆ ನೀರು ಹರಿಯುತ್ತದೆ. ಬಸ್ಸು, ಲಾರಿ, ದ್ವಿಚಕ್ರವಾಹನಗಳು ಎಲ್ಲವೂ ಇದೇ ಕೋಡಿಯ ಮೇಲೆ ಹಾದುಹೋಗಬೇಕಾಗಿದೆ.

ಕಳೆದ ೨ ವರ್ಷಗಳ ಹಿಂದೆ ಕೋಡಿಬಿದ್ದ ಸಂದರ್ಭದಲ್ಲಿ ದೊಡ್ಡ ದೊಡ್ಡ ಗಾತ್ರದಷ್ಟು ಹಳ್ಳಗಳು ಬಿದ್ದ ಕಾರಣ ಆಗಿನ ಸಂಸದ ಎಸ್.ಮುನಿಸ್ವಾಮಿ ಕೋಡಿಯ ಮೇಲೆ ಬಿದ್ದ ಹಳ್ಳಗಳಿಗೆ ಕಾಂಕ್ರೀಟ್ ಮಾಡಿಸಿದ್ದರು. ಈಗ ಅವು ಕಿತ್ತುಹೋಗಿದ್ದು, ಕಳೆದ ಒಂದು ವರ್ಷದಿಂದ ಮತ್ತೆ ಹಳ್ಳಗಳು ಬಿದ್ದು, ಅದೇ ರಸ್ತೆಯಲ್ಲಿ ವಾಹನ ಸವಾರರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಅನೇಕ ಬಾರಿ ಇಲಾಖೆಯ ಮತ್ತು ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಮತ್ತು ವಾಹನ ಸವಾರರು ಮನವಿ ಮಾಡಿದ್ದರು. ಲೋಕೋಪಯೋಗಿ ಇಲಾಖೆಯವರು ಈ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೋಡಿಬಿದ್ದ ಸಂದರ್ಭದಲ್ಲಿ ಕೋಡಿ ಮೇಲೆ ಹರಿಯುವ ನೀರನ್ನು ನೋಡಲು ಸುತ್ತಮುತ್ತಲ ಹಾಗೂ ನಗರಪ್ರದೇಶಗಳ ಸಾವಿರಾರು ಜನ ವೀಕ್ಷಣೆ ಮಾಡಲು ಬರುತ್ತಾರೆ.

ಮಳೆಗಾಲವಾದ ಕಾರಣ ಯಾವ ಸಂದರ್ಭದಲ್ಲಿ ಮಳೆ ಹೆಚ್ಚಾಗುತ್ತದೋ ಗೊತ್ತಿಲ್ಲ. ಮಳೆ ನೀರು ಹೆಚ್ಚಾದರೆ ಕೋಡಿಬೀಳುವುದು ಗ್ಯಾರಂಟಿ. ದೊಡ್ಡಕೆರೆ ಆದ ಕಾರಣ ಹತ್ತಾರು ಕೆರೆಗಳಿಗೆ ಈ ಕೆರೆ ಜೀವನಾಡಿ ಆಗಿರುವ ಕಾರಣ. ಈ ಕೆರೆಯಿಂದಲೇ ಇತರೆ ಕೆರೆಗಳಿಗೆ ನೀರು ಹರಿಯುತ್ತವೆ. ಕೆರೆ ಕೋಡಿಯನ್ನು ತಡೆಯಲು ಸಾಧ್ಯವಿಲ್ಲ. ಕೋಲಾರ ಶ್ರೀನಿವಾಸಪುರಕ್ಕೆ ಇದೇ ಏಕೈಕ ರಸ್ತೆಯಾಗಿರುವ ಕಾರಣ ಕೋಡಿಯ ಮೇಲೆಯೇ ವಾಹನಗಳು ಓಡಾಡಬೇಕಾಗುತ್ತದೆ.

ಕೋಡಿಹರಿಯುವ ಮೊದಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕೋಡಿ ಮೇಲೆ ಬಿದ್ದಿರುವ ಹಳ್ಳಗಳನ್ನು ಮುಚ್ಚಿದರೆ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ. ಇಲ್ಲವಾದರೆ ರಾತ್ರಿ ವೇಳೆಯಲ್ಲಿ ಸದರಿ ರಸ್ತೆ ಮೇಲೆ ಸಂಚರಿಸುವ ದ್ವಿಚಕ್ರ ವಾಹನಗಳು ಹಾಗೂ ಕಾರುಗಳು ಗುಂಡಿಗಳಲ್ಲಿ ಬಿದ್ದು, ಸಿಕ್ಕಿಹಾಕಿಕೊಳ್ಳಲಿದೆ. ಹಾಗೂ ದ್ವಿಚಕ್ರ ವಾಹನಗಳ ಸವಾರರು ಗುಂಡಿಗಳಲ್ಲಿ ಬಿದ್ದು ಕೈಕಾಲು ಮುರಿದುಕೊಳ್ಳಲಿದ್ದಾರೆ.

ಚಿತ್ರ ೧೦ ಕೆ.ಎಲ್.ಆರ್. ೦೨ : ಮುದುವಾಡಿ ಕೆರೆ ತುಂಬಿದ್ದು, ಕೋಡಿ ಹರಿಯುವ ಹಂತದಲ್ಲಿ ಇರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net