ದುರಸ್ತಿಗಾಗಿ ಕಾಯುತ್ತಿರುವ ಬನ್ನೂರು ಉಪನೋಂದಣಾಧಿಕಾರಿ ಕಚೇರಿ

tn pura 1
ಉಪನೋಂದಣಾಧಿಕಾರಿ ಕಚೇರಿ
Published on

ತಿ.ನರಸೀಪುರ: ನಿತ್ಯ ಜನಸಂದಣಿ ಇರುವ ತಾಲೂಕಿನ ಬನ್ನೂರು ಹೋಬಳಿಯ ಹೃದಯ ಭಾಗದಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಶಿಥಿಲಾವಸ್ಥೆ ತಲುಪಿದ್ದರೂ ಕಟ್ಟಡದ ದುರಸ್ತಿ ಬಗ್ಗೆ ಸಂಬಂಧಪಟ್ಟವರು ಗಮನಹರಿಸದೆ ನಿರ್ಲಕ್ಷೃ ವಹಿಸಿದ್ದಾರೆ.

ಸುಮಾರು 70 ವರ್ಷಗಳ ಹಳೆಯ ಕಟ್ಟಡದಲ್ಲಿ ಇಂದಿಗೂ ನೋಂದಣೆ ಸೇರಿದಂತೆ ಇತರ ವ್ಯವಹಾರಗಳು ನಡೆಯುತ್ತಿವೆ. ಶಿಥಿಲಗೊಂಡ ಕಟ್ಟಡದಲ್ಲೇ ಅಧಿಕಾರಿಗಳು ಹಾಗೂ ಸಾರ್ವಜನಿಕರು ಜೀವ ಕೈಯಲ್ಲಿ ಹಿಡಿದು ಕೂರಬೇಕಿದೆ.

ಶಿಥಿಲಗೊಂಡಿರುವ ಕಟ್ಟಡ ಯಾವ ಸಂದರ್ಭದಲ್ಲಿಯಾದರೂ ಕುಸಿಯಬಹುದು ಎಂಬ ಆತಂಕವಿದೆ. ನೋಂದಣಿಗಾಗಿ ಬರುವ ಸಾರ್ವಜನಿಕರಿಗೆ ಯಾವುದೇ ತರಹದ ಮೂಲಸೌಕರ್ಯಗಳು ಇಲ್ಲಿ ಇಲ್ಲ. ಕಚೇರಿಯ ಪಕ್ಕದಲ್ಲೇ ಸಾರ್ವಜನಿಕ ಅಸ್ಪತ್ರೆ ಇದೆ. ನೋಂದಣಿಗೆ ಬರುವ ಮಹಿಳೆಯರು ಶೌಚಕ್ಕೆ ಆಸ್ಪತ್ರೆಯನ್ನೇ ಅವಲಂಬಿಸಬೇಕಿದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಈ ಕಟ್ಟಡದ ದುರಸ್ತಿ ಅಥವಾ ಸ್ಥಳಾಂತರಕ್ಕೆ ಯಾರೂ ಗಮನಹರಿಸುತ್ತಿಲ್ಲ. ಸ್ಥಳೀಯ ಶಾಸಕರೂ ಇದರ ಬಗ್ಗೆ ಗಮನಹರಿಸಿಲ್ಲ. ಈ ಕಟ್ಟಡದ ಬಗ್ಗೆ ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

ಪಕ್ಕದ ಮಳವಳ್ಳಿ ತಾಲೂಕಿನ ಕಿರಗಾವಲು ಹೋಬಳಿಯೂ ಇದರ ವ್ಯಾಪ್ತಿಗೆ ಒಳಪಟ್ಟಿದೆ. ಪ್ರತಿನಿತ್ಯ ಲಕ್ಷಾಂತರ ರೂ. ಆದಾಯವನ್ನು ಸರ್ಕಾರಕ್ಕೆ ನೀಡುವ ಇಲಾಖೆಯಲ್ಲಿ ಸಾರ್ವಜನಕರಿಗೆ ಮೂಲಸೌಕರ್ಯಗಳು ಸಿಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ, ಕ್ಷೇತ್ರದ ಶಾಸಕರೂ ಆದ ಎಚ್.ಸಿ.ಮಹದೇವಪ್ಪ ಅವರು ಈ ಬಗ್ಗೆ ಗಮನಹರಿಸಿ, ಇಲ್ಲಿಗೆ ಬರುವ ಸಾರ್ವಜನಿಕರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕಿದೆ.

ಮಧ್ಯವರ್ತಿಗಳ ಕಾಟ ಹೆಚ್ಚಾಗಿದೆ: ಈ ಕಟ್ಟಡ 1932ರಲ್ಲಿ ನಿರ್ಮಾಣವಾಗಿದ್ದು, ಮೂಲ ಸೌಕರ್ಯಗಳ ಕೊರತೆ ಇದೆ. ಕಚೇರಿಗೆ ಬಂದು ಹೋಗುವ ರೈತರು ಹಾಗೂ ಸಾಮಾನ್ಯಜನರಿಗೆ ಕೂರಲು ಆಸನ, ಶುದ್ಧ ಕುಡಿಯುವ ನೀರು, ಸೂಕ್ತ ಶೌಚಗೃಹ ವ್ಯವಸ್ಥೆ ಇಲ್ಲ. ಇಲ್ಲಿಗೆ ಮಹಿಳೆಯರು, ವೃದ್ಧರು ಬೆಳಗ್ಗೆ ಬಂದರೆ ಸಂಜೆಯವರೆಗೂ ಕಾಯಬೇಕಿದೆ. ಇಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿದ್ದು, ಹಣ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಇದಕ್ಕೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ಕಾರಣವಾಗಿದೆ.


ಹೊಸ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯ ಅಧಿಕಾರಿಗಳು ಕಾಟಾಚಾರಕ್ಕೆ ಪತ್ರ ಬರೆದು ಕೈ ಕಟ್ಟಿ ಕುಳಿತ್ತಿದ್ದಾರೆ. ಅಲ್ಲದೆ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಕಡೆಗಣಿಸಿದ್ದಾರೆ. ಜನಪ್ರತಿನಿಧಿಗಳು ಗಮನಹರಿಸಿ ಹೊಸ ಕಟ್ಟಡ ನಿರ್ಮಾಣ ಮಾಡುವ ಮೂಲಕ ಇಲ್ಲಿಗೆ ಬರುವ ರೈತರು ಹಾಗೂ ಸಾರ್ವಜನಿಕರಿಗೆ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಎಚ್ಚರಿಕೆ ನೀಡಿದ್ದಾರೆ.

ಲೋಕೊಪಯೋಗಿ ಇಲಾಖೆ ಹಾಗೂ ನಿರ್ಮಿತಿ ಕೇಂದ್ರಕ್ಕೆ ಈಗಾಗಲೇ ನೀಲಿನಕ್ಷೆ ತಯಾರು ಮಾಡುವಂತೆ ಪತ್ರ ವ್ಯವಹಾರ ಮಾಡಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಈ ಬಗ್ಗೆ ಕ್ರಮ ವಹಿಸಲು ಮುಂದಾಗಿದ್ದೇವೆ. ಈಗಿರುವ ಕಟ್ಟಡವನ್ನು ತೆರವುಗೊಳಿಸಿ, ಅದೇ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲು ಸ್ಥಳಿಯ ಶಾಸಕರ ಗಮನಕ್ಕೆ ತರಲಾಗಿದೆ. ಅವರು ಕೂಡ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಕೂಡಲೇ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಲಿದ್ದೇವೆ.
ಚನ್ನನಾಯ್ಕ, ಉಪನೋಂದಣಾಧಿಕಾರಿ, ಬನ್ನೂರು

ನೋಂದಣಿ ಕಚೇರಿಯನ್ನು ಈಗಿರುವ ಸ್ಥಳದಿಂದ ಬೇರೆಡೆ ಸ್ಥಳಾಂತರಿಸಬೇಕು. ನೂತನ ಕಟ್ಟಡ ನಿರ್ಮಾಣಕ್ಕೆ ಈ ಜಾಗ ಸಾಕಾಗುವುದಿಲ್ಲ. ಜತೆಗೆ ಪಾರ್ಕಿಂಗ್ ವ್ಯವಸ್ಥೆಗೆ ಸಮಸ್ಯೆಯಾಗಲಿದೆ. ಯಾರೇ ಬಂದರೂ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಕಚೇರಿಗೆ ತೆರಳುತ್ತಾರೆ. ಆದ್ದರಿಂದ ಕಚೇರಿಯನ್ನು ಸಂತೆಮಾಳ ಅಥವಾ ಬೇರೆಡೆ ವಿಶಾಲವಾದ ಪ್ರದೇಶದಲ್ಲಿ ನಿರ್ಮಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ಇದಕ್ಕೆ ಕಡಿವಾಣ ಹಾಕಲು ಕೂಡಲೇ ಜಿಲ್ಲಾಡಳಿತ ಗಮನವಹಿಸಬೇಕು.
ರಂಗಸ್ವಾಮಿ, ಮೇಗಳಕೊಪ್ಪಲು ನಿವಾಸಿ

ನಾನು ಶಾಸಕರಾಗಿದ್ದಾಗಲೇ ಈ ಕಟ್ಟಡದ ಸ್ಥಿತಿ ಗೊತ್ತಿತ್ತು. ಅದರ ಬಗ್ಗೆ ಸಂಬಂಧಪಟ್ಟ ಇಲಾಖೆ ಜತೆ ಚರ್ಚಿಸಿ ಸುಸಜ್ಜಿತವಾದ ಕಟ್ಟಡ ನಿರ್ಮಿಸುವ ಯೋಜನೆ ಇತ್ತು. ಆದರೆ ನಮ್ಮ ಸರ್ಕಾರ ಬದಲಾಗಿದ್ದರಿಂದ ಈ ಯೋಜನೆ ಅಲ್ಲಿಗೆ ನಿಂತುಹೋಗಿದೆ. ನಂತರ ಬಂದ ಶಾಸಕರು ಈ ಕಟ್ಟಡವನ್ನು ನಿರ್ಮಾಣ ಮಾಡಬಹುದಿತ್ತು. ಇದೀಗ ನಮ್ಮ ಸರ್ಕಾರವೇ ಇದ್ದು, ಸಚಿವರ ಗಮನಕ್ಕೆ ತಂದು ಕೂಡಲೇ ಕಟ್ಟಡ ನಿರ್ಮಾಣ ಮಾಡಿ, ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಾಗುವುದು.
ಸುನೀತಾ ವೀರಪ್ಪಗೌಡ, ಮಾಜಿ ಶಾಸಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net