

ಹೊಸ ತಲೆಮಾರಿನ ದುಬಾರಿ ಜೀವನಶೈಲಿಯಿಂದ ಜಲ ಮೂಲಗಳಾದ ನದಿ, ಕೆರೆ-ಕಟ್ಟೆಗಳ ನೀರು ಕಲುಷಿತಗೊಳ್ಳುತ್ತಿವೆ ಎಂದು ಸ್ವಚ್ಛತಾ ಮೈಸೂರು ಫೌಂಡೇಷನ್‌ನ ಗಾಂಧಿ ಸರ್ವೋದಯ ಮಂಡಲದ ಲೀಲಾ ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ಲಾಸ್ಟಿಕ್ ಬಳಕೆ ಮಿತಿ ಮೀರಿದೆ. ಪರಿಸರ ಜಾಗೃತಿ ಮೂಡಿಸುವಲ್ಲಿ ಹಿಂದಿನವರು ತಪ್ಪು ಮಾಡಿರಬಹುದು. ಆದರೆ ಈ ತಪ್ಪನ್ನು ಇಂದಿನ ಪೀಳಿಗೆ ಮಾಡಬಾರದು. ಭವಿಷ್ಯದ ದೃಷ್ಟಿಯಿಂದ ಸರಳ ಜೀವನ ನಡೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಇಂದಿನ ಯುವ ಸಮೂಹ ಹೆಚ್ಚು ಆನ್‌ಲೈನ್ ಶಾಪಿಂಗ್ ಮೊರೆ ಹೋಗುತ್ತಿದೆ. ಉಡುಪು, ಆಹಾರ ಪದಾರ್ಥ, ಸೌಂದರ್ಯವರ್ಧಕಗಳ ಜತೆಗೆ ಕಸವೂ ನಿಮ್ಮ ಮನೆ ಬರಲಿದೆ. ಇದನ್ನು ಸರಿಯಾಗಿ ಸಂಸ್ಕರಣೆ ಮಾಡದೆ ಬಿಸಾಡುತ್ತಿದ್ದಾರೆ. ಇದು ಕೂಡ ನೀರಿನ ಮೂಲಗಳನ್ನು ಸೇರುತ್ತಿದೆ. ಹಾಗಾಗಿ, ಇಂದು ‘ಕಸ ಇಲ್ಲದ ಊರಿಲ್ಲ’ ಎಂಬ ಹೊಸ ಗಾದೆಯೂ ಸೃಷ್ಟಿಯಾಗಿದೆ ಎಂದರು.
ಸ್ಯಾನಿಟರಿ ಪ್ಯಾಡ್‌ಗಳ ಬಳಕೆಯನ್ನು ಹೆಣ್ಣು ಮಕ್ಕಳು ನಿಲ್ಲಿಸಬೇಕು. ಇದು ಅನಾರೋಗ್ಯದ ಜತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗಿದೆ. ಇದರಿಂದ ಕೆಲವು ಮಹಿಳೆಯರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ. ಪ್ಯಾಡ್ ಬಳಕೆಯಿಂದ ಮಕ್ಕಳು ತುರಿಕೆ ಸಮಸ್ಯೆಯಿಂದ ಬಳಲುವುದು ಸಾಮಾನ್ಯವಾಗಿದೆ. ಹಾಗಾಗಿ ಬಟ್ಟೆ ಉತ್ಪನ್ನಗಳನ್ನು ಬಳಸಿ ಆರೋಗ್ಯ ಮತ್ತು ಪರಿಸರ ಎರಡು ಕಾಪಾಡಿಕೊಳ್ಳಿ ಎಂದರು.
ಚಾಮುಂಡಿಬೆಟ್ಟದ ಮಾದರಿಯಲ್ಲಿ ನಗರದ ಮತ್ತೊಂದು ಕಡೆ ಪ್ಲಾಸ್ಟಿಕ್ ಬೆಟ್ಟವೂ ನಿರ್ಮಾಣವಾಗುತ್ತಿದೆ. ಮುಂದೆ ಒಂದು ದಿನ ಅಲ್ಲಿಯೂ ಒಂದು ದೇವರನ್ನು ಕೂರಿಸುವ ಕಾಲ ಬರಲಿದೆ ಎಂದು ಹೇಳಿದರು.
ಜೆಎಸ್‌ಎಸ್ ಮಹಾವಿದ್ಯಾಪೀಠ ಕಾಲೇಜು ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ ಮಾತನಾಡಿ, ಜಗತ್ತಿನಲ್ಲಿ 3ನೇ ಮಹಾಯುದ್ಧ ಸಂಭವಿಸಿದರೆ ಅದು ನೀರಿಗಾಗಿ ನಡೆಯುತ್ತದೆ. ಈಗಾಗಲೇ ಪಕ್ಕದ ರಾಜ್ಯಗಳ ಜತೆಗೆ ಕಾವೇರಿ, ಮಹದಾಯಿ ನೀರಿಗಾಗಿ ವೈಮನಸ್ಸು ಮೂಡಿದೆ. ಮನುಷ್ಯನ ಅನಾಹುತಗಳೇ ಪರಿಸರಕ್ಕೆ ಮಾರಕವಾಗಿವೆ. ಮೊದಲು ನಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ.ಎಚ್.ರವಿ ಕಾರ್ಯಕ್ರಮ ಉದ್ಘಾಟಿಸಿದರು. ವಿಜ್ಞಾನಿ ಡಾ.ಬಿ.ಎನ್.ಜ್ಞಾನೇಶ್, ಹೈದರಾಬಾದ್‌ನ ಐಸಿಆರ್‌ಐಎಸ್‌ಎಟಿ ಮಾಜಿ ಉಪ ಮಹಾನಿರ್ದೇಶಕ ಡಾ.ಸಿ.ಎಲ್.ಲಕ್ಷ್ಮೀಪತಿ ಗೌಡ, ಐಎಟಿ ಕಾರ್ಯದರ್ಶಿ ಡಾ.ಕೆ.ಆರ್.ರವೀಂದ್ರ, ಐಕ್ಯುಎಸಿ ಸಂಚಾಲಕ ಎಂ.ಗಿರೀಶ್ ಹಾಜರಿದ್ದರು.