ದೀರ್ಘ ಅನುಭವದ ಅಪರೂಪದ, ಮುತ್ಸದ್ದಿ ನಾಯಕ: ಕೃಷ್ಣ@90

SMK
ಎಸ್​.ಎಂ.ಕೃಷ್ಣ ಜತೆ ಸಚಿವ ಸುಧಾಕರ್
Published on
ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಬೀಡು ಮಾಡಲು ಪಾಂಚಜನ್ಯ ಮೊಳಗಿಸಿ, ಸುಶಾಸನದ ಸುದರ್ಶನ ಮಂತ್ರದ ಮೂಲಕ ಕರುನಾಡಿನಲ್ಲಿ ಸುವರ್ಣಯುಗ ಸ್ಥಾಪಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡಿನ ಮುತ್ಸದ್ದಿ ನಾಯಕರಲ್ಲಿ ಅಗ್ರಗಣ್ಯರು. ಅವರ ಜನಪರ ಕಾಳಜಿ ಹಾಗೂ ಕಾರ್ಯಗಳು ಅನನ್ಯ.

| ಡಾ.ಕೆ.ಸುಧಾಕರ್

ರಾಜಕಾರಣ ಮತ್ತು ಆಡಳಿತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ ಅವು ಎಂದೂ ಒಂದರ ಮುಖ ಒಂದು ನೋಡುವುದಿಲ್ಲ. ಇವೆರಡನ್ನೂ ಒಂದೇ ತಕ್ಕಡಿಯಲ್ಲಿ ಹಾಕಿ, ತೂಗಿ, ಅಳೆದು, ಅಂತಿಮವಾಗಿ ಜನಕಲ್ಯಾಣದ ಗುರಿ ತಲುಪುವುದು ಕಬ್ಬಿಣದ ಕಡಲೆ. ಎಷ್ಟೋ ಜನಸೇವಕರಿಗೆ ಅಭಿವೃದ್ಧಿಗಾಗಿ ದುಡಿಯಬೇಕೆಂಬ ತುಡಿತವಿದ್ದರೂ, ಕೈಯಲ್ಲಿ ಅಧಿಕಾರವಿರುವುದಿಲ್ಲ. ಇನ್ನೂ ಕೆಲವರಿಗೆ ಅಧಿಕಾರವಿದ್ದಾಗ ಜನಪರ ಕೆಲಸ ಮಾಡುವ ಅವಕಾಶ ಸಿಗುವುದಿಲ್ಲ. ಎಲ್ಲರ ಮನಸ್ಸಿಗೆ ಹತ್ತಿರವಾಗಿ ಅಧಿಕಾರ ಗಳಿಸಿ, ನಾಡಿನ ಶ್ರೇಯಸ್ಸಿಗೆ ಪೂರ್ಣ ಶ್ರದ್ಧೆಯಿಂದ ದುಡಿದ ರಾಜಕಾರಣಿಗಳು ಅಪರೂಪ. ಅಂತಹ ಮುತ್ಸದ್ದಿ, ಡಿಗ್ನಿಫೈಡ್ ರಾಜಕಾರಣಿ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ. ಇಂದು ಅವರು 90ನೇ ವಸಂತಕ್ಕೆ ಕಾಲಿಡುತ್ತಿದ್ದು, ಅವರ ಅಗಾಧ ಅನುಭವದ ಪರಿಚಯ ಎಲ್ಲರಿಗೂ ಆಗಬೇಕಿದೆ.

ಸುಶಿಕ್ಷಿತರು, ಸಭ್ಯರು, ಸಾಮಾಜಿಕ ಕಳಕಳಿ ಉಳ್ಳವರ ಕ್ಷೇತ್ರವಾಗಿದ್ದ ರಾಜಕಾರಣ ಕಾರಣಾಂತರಗಳಿಂದ ಇಂದು ಶ್ರೀಸಾಮಾನ್ಯನ ದೃಷ್ಟಿಯಲ್ಲಿ ಗೌರವ ಕಳೆದುಕೊಳ್ಳುತ್ತಿದೆ ಎನ್ನುವುದು ಕಟುಸತ್ಯ. ರಾಜಕೀಯ, ರಾಜಕಾರಣಿಗಳು ಎಂದರೆ ಮೂಗು ಮುರಿಯುವ ಪರಿಸ್ಥಿತಿ ಇರುವ ಈ ಸಂದರ್ಭದಲ್ಲಿ ನಾಡು ಕಟ್ಟಿದ ನಾಯಕರನ್ನು ನೆನೆಸಿಕೊಳ್ಳುವ ಮೂಲಕ ಯುವ ಜನಾಂಗಕ್ಕೆ ಪ್ರೇರಣೆ ತುಂಬುವ ಕೆಲಸವಾಗಬೇಕಿದೆ.

ಕರ್ನಾಟಕವನ್ನು ಮಾಹಿತಿ ತಂತ್ರಜ್ಞಾನದ ಬೀಡು ಮಾಡಲು ಪಾಂಚಜನ್ಯ ಮೊಳಗಿಸಿ, ಸುಶಾಸನದ ಸುದರ್ಶನ ಮಂತ್ರದ ಮೂಲಕ ಕರುನಾಡಿನಲ್ಲಿ ಸುವರ್ಣಯುಗ ಸ್ಥಾಪಿಸಿದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡಿನ ಮುತ್ಸದ್ದಿ ನಾಯಕರಲ್ಲಿ ಅಗ್ರಗಣ್ಯರು. ರಾಷ್ಟ್ರ ರಾಜಕಾರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ‘ಅಜಾತಶತ್ರು’ ಎಂದು ಹೆಸರಾದಂತೆ, ರಾಜ್ಯ ರಾಜಕಾರಣದಲ್ಲಿ ಕೃಷ್ಣ ಅವರನ್ನು ‘ಅಜಾತಶತ್ರು’ ಎಂದರೆ ತಪ್ಪಾಗಲಾರದು. ಅವರ ನಡೆ ಹಾಗೂ ನುಡಿಯಲ್ಲೇ ಸುದೀರ್ಘ ರಾಜಕೀಯದ ಅನುಭವ ಎದ್ದು ಕಾಣುತ್ತದೆ. ಪರಿಸ್ಥಿತಿಗಳ ಭೀಕರ ಸುನಾಮಿಗಳು ಬಂದರೂ ಮಂದಸ್ಮಿತರಾಗಿ ಆ ಅಲೆಗಳಿಗೆ ಎದೆಯೊಡ್ಡಿದ ಕೆಲವೇ ರಾಜಕಾರಣಿಗಳಲ್ಲಿ ಅವರು ಒಬ್ಬರು.

ಯಶಸ್ವಿ, ಮಾದರಿ ರಾಜಕಾರಣಿ: ಕೃಷ್ಣ ಅವರಂತೆ ಸಮತೋಲನದ ರಾಜಕಾರಣದ ಮಾಡುವುದು ಕಷ್ಟಸಾಧ್ಯ. ಬಹುಶಃ ಅವರ ಶಿಕ್ಷಣ, ಹಿರಿಯ ರಾಜಕಾರಣಿಗಳೊಂದಿಗಿನ ಒಡನಾಟ, ಬದ್ಧತೆ ಅವರನ್ನು ಈ ಹಂತಕ್ಕೆ ಕೊಂಡೊಯ್ದಿರಬಹುದು. ಸಚಿವ, ಸ್ಪೀಕರ್, ಉಪಮುಖ್ಯಮಂತ್ರಿ, ವಿದೇಶಾಂಗ ಸಚಿವ- ಹೀಗೆ ನಾನಾ ಹುದ್ದೆಗಳಲ್ಲಿ ಪಳಗಿದ್ದ ಅವರು ರಾಜಕಾರಣದಲ್ಲಿ ಸಮತೋಲನದ ಪಾಠವನ್ನು ಆರಂಭಿಕ ಹಂತದಲ್ಲೇ ಕಲಿತಿದ್ದಿರಬಹುದು. ಅವರು ಮುಖ್ಯಮಂತ್ರಿಯಾಗಿದ್ದಾಗ ವರನಟ ಡಾ.ರಾಜ್​ಕುಮಾರ್ ಅಪಹರಣ, ಕಾವೇರಿ ಜಲವಿವಾದ ಮೊದಲಾದ ಸಾಲು ಸಾಲು ಸಂಕಷ್ಟಗಳು ಉಸಿರು ಕಟ್ಟಿಸುವಂತಿದ್ದರೂ ಅದನ್ನು ಯಶಸ್ವಿಯಾಗಿ ನಿಭಾಯಿಸಿ ಮಾದರಿ ನಡೆ ಪ್ರದರ್ಶಿಸಿದ್ದು ಯುವ ರಾಜಕಾರಣಿಗಳಿಗೆ ಪಾಠ.

ಸಮತೋಲನದ ರಾಜಕಾರಣ: ಕರ್ನಾಟಕ ಹಾಗೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ, ಐಟಿ ನಗರಿಯ ನವರೂಪ ನೀಡುವಲ್ಲಿ ಕೃಷ್ಣ ಅವರ ಕೊಡುಗೆ ಪ್ರಧಾನವಾದುದು. ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ಮಾರುಕಟ್ಟೆ, ಕೆರೆಗಳನ್ನು ನಿರ್ವಿುಸಿ ಆರ್ಥಿಕ ಪ್ರಗತಿ, ಜನರ ಜೀವನ ಗುಣಮಟ್ಟಕ್ಕೆ ನಾಂದಿ ಹಾಡಿದ್ದರು. ಅವರ ಹಾದಿಯಲ್ಲೇ ಹೆಜ್ಜೆ ಇರಿಸಿ, ಬೆಂಗಳೂರಿನ ಸಾರಿಗೆ ಮೂಲಸೌಕರ್ಯ, ಕೈಗಾರಿಕಾ ಮೂಲಸೌಕರ್ಯಕ್ಕೆ ಭದ್ರ ಬುನಾದಿ ಹಾಕಿದವರು ಕೃಷ್ಣ.

ತಂದೆಯ ಪ್ರಭಾವ: ಎಸ್.ಎಂ.ಕೃಷ್ಣ ಅವರ ತಂದೆ ಎಸ್.ಸಿ.ಮಲ್ಲಯ್ಯ ಸಮಾಜ ಸುಧಾರಕರಾಗಿದ್ದರು. ತಂದೆಯ ಚಿಂತನೆಗಳು ಸಹಜವಾಗಿ ಕೃಷ್ಣ ಅವರಿಗೆ ಬಳವಳಿಯಾಗಿ ಬಂತು. ಮಲ್ಲಯ್ಯನವರು ಗ್ರಾಮೀಣ ಮಕ್ಕಳಿಗಾಗಿ 1930 ದಶಕದಲ್ಲಿ ವಸತಿ ನಿಲಯ ಆರಂಭಿಸಿ, ಜಾತಿಭೇದ ರಹಿತ ಉಚಿತ ಶಿಕ್ಷಣ ನೀಡುತ್ತಿದ್ದರು. ಕೋಲೂರಿನ ವೆಂಕಟಯ್ಯ ಎಂಬ ದಲಿತ ವಿದ್ಯಾರ್ಥಿ ಮತ್ತು ನಿಡಗಟ್ಟದ ಕಾಳಯ್ಯ ಎಂಬ ಅಂಧ ದಲಿತ ವಿದ್ಯಾರ್ಥಿ ಇವರ ಹಾಸ್ಟೆಲ್​ನಲ್ಲಿ ಕಲಿಯುತ್ತಿದ್ದರು.

1934ರಲ್ಲಿ ಮೈಸೂರು ರಾಜ್ಯಕ್ಕೆ ಬಂದಿದ್ದ ಮಹಾತ್ಮ ಗಾಂಧೀಜಿ, ಮಾರ್ಗ ಮಧ್ಯೆ ಮಲ್ಲಯ್ಯನವರ ಮನೆ ಮತ್ತು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿ ಹರಿಜನ ವಿದ್ಯಾರ್ಥಿಗಳನ್ನು ನೋಡಿ ಅಚ್ಚರಿಗೊಳಗಾಗಿದ್ದರು. ಹರಿಜನ ಫಂಡ್ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ಗಾಂಧೀಜಿಗೆ ಮಲ್ಲಯ್ಯನವರು ಬಾಲಕ ಎಸ್.ಎಂ.ಕೃಷ್ಣ ಕೈಯಿಂದ ಎರಡು ರೂಪಾಯಿ ಕಾಣಿಕೆ ನೀಡಲು ಮುಂದಾದರು. ಆದರೆ ತಮಗೆ ಕೃಷ್ಣ ಕಿವಿಯಲ್ಲಿದ್ದ ಓಲೆ ಬೇಕೆಂದು ಹೇಳಿ ಗಾಂಧೀಜಿ ನಗೆಯಾಡಿದರು. ಆ ಮಾತನ್ನು ಹಾಸ್ಯವೆಂದು ಪರಿಗಣಿಸದ ಮಲ್ಲಯ್ಯನವರು ಕೂಡಲೇ ಓಲೆ ಬಿಚ್ಚಿ ದಾನ ನೀಡಿದರು.

ರಾಜ್ಯದ ಸಮಗ್ರ ಅಭಿವೃದ್ಧಿಯ ಬಹುತೇಕ ಕನಸುಗಳನ್ನು ಅಂದುಕೊಂಡಂತೆಯೇ ಸಾಕಾರಗೊಳಿಸಿದ ಅಪರೂಪದ ನಾಯಕ ಎಸ್ಸೆಂಕೆ ಅವರು. ರಾಜ್ಯ ರಾಜಕಾರಣವನ್ನು ಬಿಟ್ಟು ಕೇಂದ್ರಕ್ಕೆ ಹೋದಾಗ ಅವರ ರಾಜಕಾರಣ ಅಂತ್ಯವಾಯಿತು ಎಂದೇ ಹೆಚ್ಚಿನವರು ಅಂದುಕೊಂಡಿದ್ದರು. ಆದರೆ ವಿದೇಶಾಂಗ ಸಚಿವರಾಗಿ ಮತ್ತಷ್ಟು ಹೆಸರು ಗಳಿಸಿದವರು ಕೃಷ್ಣ. ಮತ್ತೊಂದು ಅತ್ಯುನ್ನತ ಸ್ಥಾನದ ಮೂಲಕ ಅವರ ರಾಜಕೀಯ ನಿವೃತ್ತಿಯಾಗಿದ್ದರೆ ಸಾರ್ಥಕವಾಗುತ್ತಿತ್ತು.

ರಾಜಕೀಯದಲ್ಲಿ ನಿವೃತ್ತಿ ಎಂಬುದು ಕೃಷ್ಣರಿಗೆ ಸಲ್ಲದ ಮಾತು. ಈಗಲೂ ಅವರು ತಮ್ಮ ಕ್ಷೇತ್ರದ, ಜಿಲ್ಲೆಯ, ರಾಜ್ಯದ ಜನರ ಸಮಸ್ಯೆಗಳನ್ನು ಗಮನಿಸುತ್ತಿರುತ್ತಾರೆ. ಅವುಗಳನ್ನು ಪರಿಹರಿಸುವ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ. ಅವರ ಆಲೋಚನಾ ಲಹರಿ, ಚಿಂತನೆ, ಜನಪರ ಕಳಕಳಿ ಪ್ರತಿ ಜನಪ್ರತಿನಿಧಿಗೆ ಮಾರ್ಗದರ್ಶಿ ಪುಸ್ತಕವಾಗಲಿ.

ಎಸ್.ಎಂ.ಕೃಷ್ಣರಿಗೆ ಜನ್ಮದಿನದ ಶುಭಾಶಯಗಳು!

(ಲೇಖಕರು ಕರ್ನಾಟಕದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net