ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಳಕಿನ ಹಬ್ಬವಾದ ದೀಪಾವಳಿಯಂದು ಪಟಾಕಿ ಸಿಡಿಸುವಾಗ ತಾಲ್ಲೂಕಿನ ವಿವಿಧೆಡೆ ೨೦ ಕ್ಕೂ ಹೆಚ್ಚು ಮಂದಿ ಮಕ್ಕಳು, ಹಿರಿಯರು ಸಣ್ಣಪುಟ್ಟ ಕಣ್ಣಿನ ಸಮಸ್ಯೆಗಾಗಿ ಚಿಕಿತ್ಸೆಗೆ ಆಸ್ಪತ್ರೆಗಳಿಗೆ ಧಾವಿಸಿದ್ದು, ನಗರದ ವಿವೇಕ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಿದ್ದಾಗಿ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ತಿಳಿಸಿದರು.
ಈ ವರ್ಷ ಪರಿಸರ ಕಾಳಜಿಯಿಂದ ಅನೇಕರು ಪಟಾಕಿ ಸಿಡಿಸಿದ ಪ್ರಮಾಣ ಕಡಿಮೆಯಾಗಿದೆ ಮತ್ತು ಸಿಡಿಸುವಾಗ ಜಾಗೃತಿ ವಹಿಸಬೇಕೆಂಬ ಅರಿವು ಜನರಲ್ಲಿ ಬಂದಿರುವ ಕಾರಣ ಈ ಬಾರಿ ದೃಷ್ಟಿದೋಷದಂತಹ ಯಾವುದೇ ಗಂಭೀರ ಪ್ರಕರಣಗಳು ವರದಿಯಾಗಿಲ್ಲ. ಆಸ್ಪತ್ರೆಗೆ ಬಂದವರಲ್ಲಿ ಓರ್ವ ಯುವಕ ಸೇರಿದಂತೆ ಉಳಿದ ೧೨ ವರ್ಷಕ್ಕಿಂತ ಕಡಿಮೆ ವಯಸ್ಸಿನ ೧೦ ಮಕ್ಕಳು ಇದ್ದಾರೆ ಎಂದರು.
ದೀಪಾವಳಿಯನ್ನು ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರವೂ ಆಚರಿಸುತ್ತಿದ್ದು, ಪಟಾಕಿ ಸಿಡಿತದಿಂದಾದ ಹಾನಿಗೆ ಒಳಗಾಗಿ ಚಿಕಿತ್ಸೆಗೆ ಬುಧವಾರವೂ ರೋಗಿಗಳು ಬರುವ ಸಂಭವವಿದೆ ಎಂದು ತಿಳಿಸಿದರು.
ಮುನ್ನಚ್ಚರಿಕೆ ದೃಷ್ಟಿಯಿಂದ ದಿನದ ೨೪ ಗಂಟೆಗಳು ತುರ್ತು ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದ್ದು, ಸಂಪೂರ್ಣ ದೃಷ್ಟಿಹಾನಿಯಂತಹ ಯಾವುದೇ ಪ್ರಕರಣಗಳು ವರದಿಯಾಗಲ್ಲ. ಪಟಾಕಿಗಿಂತ ಅದರಿಂದ ಸಿಡಿಯುವ ಮಣ್ಣು ಮಿಶ್ರಿತ ರಸಾಯನಿಕದಿಂದಲೂ ಹಾನಿಯಾಗಿದೆ ಎಂದರು.
ಹಿAದಿನ ವರ್ಷಗಳಿಗಿಂತ ಈ ಬಾರಿ ಪಟಾಕಿ ಸಿಡಿತದಿಂದಾಗಿ ಚಿಕಿತ್ಸೆಗೆ ಬಂದವರ ಸಂಖ್ಯೆಯಲ್ಲಿ ಬಹಳಷ್ಟು ಕುಸಿತವಾಗಿದ್ದು, ಜನರಲ್ಲಿ ಜಾಗೃತಿ ಮೂಡಿರುವುದು ಮತ್ತು ಪರಿಸರ ಕಾಳಜಿಯಿಂದ ಹಸಿರು ಪಟಾಕಿ ಮಾತ್ರ ಸಿಡಿಸಲು ಮುಂದಾಗಿರುವುದೇ ಇದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ಸುಟ್ಟ ಗಾಯಗಳಿಗೆ ಆಯುರ್ವೇದ ಚಿಕಿತ್ಸೆ :
ನಗರದ ಹಳೆ ಮಾಧ್ಯಮಿಕ ಶಾಲೆ ಎದುರಿಗಿರುವ ವೆಂಕಟೇಶಯ್ಯಶೆಟ್ಟಿ ಸುಟ್ಟಗಾಯಗಳ ಚಿಕಿತ್ಸಾಯಲಯಕ್ಕೆ ಈ ಬಾರಿ ಕೇವಲ ಇಬ್ಬರು ಸುಟ್ಟಗಾಯಗಳಿಂದ ಚಿಕಿತ್ಸೆಗೆ ಆಗಮಿಸಿದ್ದು, ಜಾಗೃತಿಯ ಕಾರಣ ಈ ಬಾರಿ ಅನಾಹುತ ಕಡಿಮೆಯಾಗಿದೆ ಎಂದು ಪಾರಂಪರಿಕ ವೈದ್ಯ ವಿ.ಮಂಜುನಾಥ್ ಹರ್ಷ ವ್ಯಕ್ತಪಡಿಸಿದರು.
ಪ್ರತಿವರ್ಷ ಅಡುಗೆ ಎಣ್ಣೆ, ಪಟಾಕಿ ಬೆಂಕಿಯ ಸುಟ್ಟ ಗಾಯಗಳ ೨೫ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ಈ ಬಾರಿ ಕೇವಲ ಇಬ್ಬರು ಬಾಲಕರು ಕೈ ಬೆರಳುಗಳನ್ನು ಸುಟ್ಟುಕೊಂಡು ಚಿಕಿತ್ಸೆಗೆ ಬಂದಿದ್ದಾರೆ ಅಷ್ಟೆ. ಜನರಲ್ಲಿ ಮತ್ತಷ್ಟು ಅರಿವು ಮೂಡಲಿ ಎಂದು ಆಶಿಸಿದರು.
ಉಳಿದಂತೆ ವಾಸನ್ ಐಕೇರ್‌ನಲ್ಲಿ ಒಬ್ಬರು ಮಾತ್ರ ಪಟಾಕಿಯಿಂದಾದ ಹಾನಿಗೆ ಚಿಕಿತ್ಸೆ ಪಡೆದಿದ್ದು, ಉಳಿದಂತೆ ನಗರರ ಶಂಕರ್ ಕಣ್ಣಿನ ಆಸ್ಪತ್ರೆ, ಜಾಲಪ್ಪ ಆಸ್ಪತ್ರೆ, ಜಿಇಎಫ್ ರೋಟರಿ ಕಣ್ಣಾಸ್ಪತ್ರೆ ಮತ್ತಿತರರೆಡೆ ಪಟಾಕಿ ಅನಾಹುತದಿಂದ ಚಿಕಿತ್ಸೆಗೆ ಯಾರೂ ದಾಖಲಾಗದೇ ಇರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಜನರಲ್ಲಿ ಪಟಾಕಿ ಕುರಿತು ಅರಿವು ಹೆಚ್ಚಿದೆ ಎಂಬುದಕ್ಕೆ ನಿದರ್ಶನವಾಗಿದೆ.
ಚಿತ್ರ ೨೧ ಕೆ.ಎಲ್.ಆರ್. ೦೩ : ಕೋಲಾರದ ವಿವೇಕ ನೇತ್ರಾಲಯದಲ್ಲಿ ಪಟಾಕಿ ಸಿಡಿತರಿಂದ ಕಣ್ಣಿಗೆ ಗಾಯವಾಗಿರುವ ಬಾಲಕನೊಬ್ಬನಿಗೆ ನೇತ್ರ ತಜ್ಞ ಡಾ.ಹೆಚ್.ಆರ್.ಮಂಜುನಾಥ್ ಚಿಕಿತ್ಸೆ ನೀಡುತ್ತಿರುವುದು.