

ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಸಿದ್ಧತೆ ಭರದಿಂದ ಸಾಗಿದ್ದು, ಸೋಮವಾರ ನರಕ ಚತುರ್ದಶಿ ಆಚರಿಸಿರುವ ಜನರು ಲಕ್ಷ್ಮೀಪೂಜೆ ಹಾಗೂ ಬಲಿಪಾಡ್ಯಮಿ ಆಚರಣೆಗೆ ಸಜ್ಜಾಗಿದ್ದಾರೆ.
ನಗರದ ವಿವಿಧ ಮಾರುಕಟ್ಟೆಗಳಲ್ಲಿ ಮನೆ ಮನಕೆ ಬೆಳಕು ಚೆಲ್ಲುವ ಬಗೆಬಗೆಯ ಹಣತೆಗಳು, ಹಬ್ಬದ ಸಂಭ್ರಮ ಇಮ್ಮಡಿಗೊಳಿಸುವ ಪಟಾಕಿ, ಅಗತ್ಯ ವಸ್ತುಗಳ ಖರೀದಿ ಭರ್ಜರಿಯಾಗಿ ನಡೆಯಿತು. ಹಿಂದು ಸಂಪ್ರದಾಯದಲ್ಲಿ ದೀಪಾವಳಿ ಹಬ್ಬಕ್ಕೆ ಪ್ರಮುಖ ಸ್ಥಾನ ಇದೆ. ನರಕ ಚತುರ್ದಶಿ ಬಳಿಕ ಬಲಿ ಪಾಡ್ಯಮಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಬ್ಬದ ಸಿದ್ಧತೆಗಳು ಬಿರುಸಿನಿಂದ ನಡೆಯಿತು.
ಸೋಮವಾರ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಿದ್ದು, ಬುಧವಾರದ ಬಲಿಪಾಡ್ಯಮಿಗೆ ಸಿದ್ಧತೆ ಮಾಡಿಕೊಂಡರು. ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆಕೆ ಮೈದಾನದ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಹಬ್ಬದ ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂವು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿದರು.
ಹಬ್ಬದ ವೇಳೆ ಮನೆಯನ್ನು ಬೆಳಗುವ ಹಣತೆಗಳಿಗೆ ಎಳ್ಳೆಣ್ಣೆ ಹಾಕಿ ಸಾಲು ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು. ಹಬ್ಬಕ್ಕೆ ನಾಲ್ಕೈದು ದಿನ ಇರುವಾಗಲೇ ವಿವಿಧ ಬಗೆಯ ಆಕೃತಿಯ ಹಣತೆಗಳು ಮಾರುಕಟ್ಟೆಗೆ ಬಂದಿವೆ. ಪ್ರಮುಖವಾಗಿ ಶಂಖುವಿನಾಕಾರ, ಆನೆ ಮೇಲಿರುವ ಹಣತೆ, ಒಂಟೆ ಹಣತೆ, ಕುದುರೆ ಮೇಲಿರುವ ಹಣತೆ, ಗಿಳಿ ಮೇಲೆ, ನಕ್ಷತ್ರಾಕಾರ, ಬುಟ್ಟಿಯಾಕಾರ, ಕಮಲ ಹೂವಿನಾಕಾರ, ಗುಲಾಬಿಯಾಕಾರ, ಸ್ತ್ರೀಯರು ಸ್ವಾಗತಿಸುತ್ತಿರುವ ಹಣತೆ, ಪಿಂಗಾಣಿ ಹಣತೆ, ಗ್ಲಾಸ್‌ನಿಂದ ತಯಾರಿಸಿರುವ ಹಣತೆ, ಮಣ್ಣಿನ ಹಣತೆ ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾದವು.