ದಿನಗೂಲಿ ಕಾರ್ಮಿಕರ ಪ್ರತಿಭಟನೆ

02NGD1
Published on

ನಂಜನಗೂಡು: ಅನ್ನಭಾಗ್ಯ ಯೋಜನೆಯ ಪಡಿತರ ದಾಸ್ತಾನು ಲೋಡ್ ಮಾಡುವ ದಿನಗೂಲಿ ಕಾರ್ಮಿಕರಿಗೆ ನೀಡಲಾಗುತ್ತಿರುವ ಕೂಲಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ದಿನಗೂಲಿ ಕಾರ್ಮಿಕರು ಸೋಮವಾರ ಪ್ರತಿಭಟನೆ ನಡೆಸಿದರು.


ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಸೇರಿದ ದಿನಗೂಲಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಲೋಡರ್ಸ್‌ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಮಣಿಕಂಠ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್, ಅನ್‌ಲೋಡಿಂಗ್ ಮಾಡುವ ದಿನಗೂಲಿ ಕಾರ್ಮಿಕರಿಗೆ ಗುತ್ತಿಗೆದಾರರು ಸಾಗಣೆ ಟೆಂಡರ್ ನಿಯಮಗಳನ್ನು ಪಾಲಿಸುತ್ತಿಲ್ಲ. ಸಂಬಳ ಚೀಟಿ, ಮಾಸ್ಟರ್ ರೂಲ್ ನೀಡುತ್ತಿಲ್ಲ. ಸಾಗಣೆ ಪ್ರಮಾಣಕ್ಕೆ ಅನುಗುಣವಾಗಿ ಲೋಡಿಂಗ್, ಅನ್‌ಲೋಡಿಂಗ್ ಕೆಲಸಕ್ಕೆ ನಿಗದಿಪಡಿಸಿರುವ ಕೂಲಿ ನೀಡುತ್ತಿಲ್ಲ. ಇಎಸ್‌ಐ, ಪಿಎಫ್ ಪಾವತಿ ಮಾಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.


2018ರಲ್ಲಿ ಕೂಲಿ ಹಣ ಪ್ರತಿ ಕ್ವಿಂಟಾಲ್‌ಗೆ 16 ರೂ. ನಿಗದಿಪಡಿಸಲಾಗಿತ್ತು. ಇಲ್ಲಿವರೆಗೂ ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಪ್ರತಿ ಕ್ವಿಂಟಾಲ್‌ಗೆ 25 ರೂ. ಕೂಲಿ ನಿಗದಿಪಡಿಸಿ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಎಚ್ಚರಿಸಿದರು.


ಕಾರ್ಮಿಕರಾದ ಕುಮಾರ, ಶೇಖರ್, ಶಿವಣ್ಣ, ಮಂಚಯ್ಯ, ಮಹೇಶ್, ಎಂ.ಹುಚ್ಚಯ್ಯ, ನಾಗೇಂದ್ರ, ಗಂಗಾಧರ್, ಜಯಸಿಂಹ, ಭೈರವ, ಮನೋಜ್, ಕೃಷ್ಣಯ್ಯ, ನಿಖಿಲ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net