ದಿ. ಪಿ.ಶ್ರೀನಿವಾಸ್ ಸ್ಮರಣೆ ಹೆಮ್ಮೆಯ ಸಂಗತಿ

Published on

ಹನೂರು: ‘ಕೀರ್ತಿರತ್ನ’ ಪ್ರಶಸ್ತಿ ಪುರಸ್ಕೃತ ದಿ. ಪಿ.ಶ್ರೀನಿವಾಸ್ ಅವರ ಪ್ರತಿಮೆಯನ್ನು ಗೋಪಿನಾಥಂ ಗ್ರಾಮಸ್ಥರು ನಿರ್ಮಿಸಿ ಪೂಜಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ್ ಗೋಗಿ ಹೇಳಿದರು.


ಮಲೆಮಹದೇಶ್ವರ ಬೆಟ್ಟ ಸಮೀಪದ ಗೋಪಿನಾಥಂ ಗ್ರಾಮದಲ್ಲಿ ಶ್ರೀ ಶಕ್ತಿ ಮಾರಿಯಮ್ಮನ್ ದೇಗುಲದ ಮುಂದೆ ಪ್ರತಿಷ್ಠಾಪಿಸಲಾಗಿರುವ ದಿ. ಪಿ.ಶ್ರೀನಿವಾಸ್ ಅವರ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಮಾತನಾಡಿದರು.
ಅರಣ್ಯ ಹುತಾತ್ಮರನ್ನು ನೆನೆಯುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ದಿ. ಪಿ.ಶ್ರೀನಿವಾಸ್ ಅವರು ಗೋಪಿನಾಥಂ ಗ್ರಾಮಕ್ಕೆ ನೀಡಿರುವ ಸೇವೆ, ಗ್ರಾಮಸ್ಥರೊಂದಿಗೆ ಅವರಿಗಿದ್ದ ಒಡನಾಟ, ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಪ್ರತಿ ವರ್ಷ ಅವರ ನೆನಪಿನಲ್ಲಿ ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯ ಸಂಗತಿ. ಶ್ರೀನಿವಾಸ್ ಅವರ ಪ್ರತಿಮೆಯನ್ನು ದೇಗುಲದ ಮುಂಭಾಗ ನಿರ್ಮಿಸಿ ಪೂಜಿಸುವ ಔದಾರ್ಯ ಮೆಚ್ಚುವಂಥದ್ದು. ಶ್ರೀನಿವಾಸ್ ಅವರ ಆದರ್ಶ ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆಯಾಗಿದೆ. ಹಾಗೆಯೆ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಇಲಾಖೆಗೆ ಸಹಕಾರ ನೀಡಬೇಕು ಎಂದು ಕೋರಿದರು.


ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ ಮಾತನಾಡಿ, ಅರಣ್ಯ ಇಲಾಖೆ ಪಾಲಿಗೆ ಗೋಪಿನಾಥಂ ಗ್ರಾಮ ಪುಣ್ಯಕ್ಷೇತ್ರ ಇದ್ದಂತೆ. ವೀರಪ್ಪನ್‌ನ ಮನಪರಿವರ್ತನೆಯ ಸಲುವಾಗಿ ಹತ್ಯೆಯಾದ ಪಿ.ಶ್ರೀನಿವಾಸ್ ಅವರ ದಕ್ಷತೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಶಕ್ತಿಯ ಚಿಲುಮೆಯಾಗಿದೆ. ಅವರ ಭಾವನಾತ್ಮಕ ಸಂಬಂಧ ಇಲಾಖೆಗೆ ಪ್ರೇರಣೆಯಾಗಿದೆ. ಶ್ರೀನಿವಾಸ್ ಅವರ ತ್ಯಾಗ, ಬಲಿದಾನವನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಂಡು ಅರಣ್ಯ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.


ಗೋಪಿನಾಥಂ ಮಿಸ್ಟ್ರಿ ಟೇಲ್ಸ್ ಕ್ಯಾಂಪ್‌ನಲ್ಲಿ ದಿ. ಪಿ.ಶ್ರೀನಿವಾಸ್ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು. ನಂತರ ಎರಿಕೆಯಮ್ ಹಳ್ಳದಲ್ಲಿನ ಶ್ರೀನಿವಾಸ್ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.


ಎಪಿಸಿಸಿಎಫ್ ಮನೋಜ್‌ಕುಮಾರ್, ಸಿಸಿಎಫ್ ಉಪೇಂದ್ರಪ್ರತಾಪ್ ಸಿಂಗ್, ಡಿಸಿಎಫ್ ನಂದೀಶ್, ಎಸಿಎಫ್‌ಗಳಾದ ಅಂಕರಾಜು,ನಂಜುಂಡಯ್ಯ, ನಾಗೇಂದ್ರಮೂರ್ತಿ, ಆರ್‌ಎಫ್‌ಒಗಳಾದ ನಿಶ್ಚಿತ್, ಸೈಯದ್‌ಸಾಬ್ ನದಾಫ, ಸುಂದರ್, ರವಿ, ದಿ.ಶ್ರೀನಿವಾಸ್ ಅವರ ಪುತ್ರ ನಾಗಮುರಳಿ, ಸಹೋದರಿ ರಾಜಲಕ್ಷ್ಮೀ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಉದಯಕುಮಾರ್, ವಾಸುದೇವಮೂರ್ತಿ, ಚಾ.ನಗರ ಎಸ್‌ಡಿವಿ ಗ್ರಾನೈಟ್ ವ್ಯವಸ್ಥಾಪಕ ಸುದರ್ಶನ್ ರೆಡ್ಡಿ, ಗೋಪಿನಾಥಂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net