ದಾವಣಗೆರೆಗೆ ಬ್ಲ್ಯಾಕ್ ಗ್ಯಾಂಗ್ ಕಾಲಿಟ್ಟಿದೆಯೇ? ಒಂಟಿ ಮಹಿಳೆಯರ ಮನೆಗಳೇ ಇವರ ಗುರಿಯೇ..??

pixlr_20230914072648111.jpg
Published on

ದಾವಣಗೆರೆ :ಸಾರ್ವಜನಿಕರೇ ಹುಷಾರ್ ! ದಾವಣಗೆರೆಗೆ ಬ್ಲ್ಯಾಕ್ ಗ್ಯಾಂಗ್ ಕಾಲಿಟ್ಟಿದೆಯಂತೆ. ಹಾಡು-ಹಗಲೇ ಮನೆಗೆ ನುಗ್ಗುವ ಈ ತಂಡ ಕೈಗೆ ಸಿಕ್ಕ ನಗ, ನಗದು ದೋಚಿ ಪರಾರಿ ಆಗುತ್ತದೆ.

ನಾನು ಗ್ಯಾಂಗ್‌ಗೆ ಸೇರಿದವನು ಎಂದು ಹೇಳಿಕೊಂಡ ದರೋಡೆಕೋರ ನಗರದ ಕುಂದುವಾಡ ರಸ್ತೆಯ ಬಾಲಾಜಿ ಲೇಔಟ್‌ನ ಮನೆಯೊಂದಕ್ಕೆ ಬುಧವಾರ ನುಗ್ಗಿ ಮನೆಯ ಗೃಹಿಣಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ 5 ಲಕ್ಷ ರೂ. ದರೋಡೆ ಮಾಡಿದ್ದಾನೆ. ಗಾಯಾಳು ಯೋಗೀಶ್ವರಿ ಅವರು ಇದೀಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಡಹಗಲೇ ನಡೆದ ಈ ಕೃತ್ಯ ದಾವಣಗೆರೆ ಜನರನ್ನು ಬೆಚ್ಚಿಬೀಳಿಸಿದೆ. ದರೋಡೆಕೋರ ಮನೆ ಪ್ರವೇಶಿಸುವ ಹಾಗೂ ಹೊರಗೆ ಹೋಗುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ರಾಮಗೊಂಡ ಬಸರಗಿ ಭೇಟಿ ನೀಡಿದ್ದರು. ಬೆರಳಚ್ಚು ತಜ್ಞರು, ಶ್ವಾನ ದಳವನ್ನು ಕರೆಸಿ ತನಿಖೆ ನಡೆಸಲಾಗಿದೆ.

ಪ್ರಕರಣದ ವಿವರ:

ಉಪ ನೋಂದಣಾಧಿಕಾರಿಕಚೇರಿ ಆವರಣದಲ್ಲಿ ಜಿಲ್ಲಾ ಪತ್ರ ಬರಹಗಾರರಾಗಿರುವ ಶ್ರೀನಾಥ್ ಅವರ ಮನೆಯಲ್ಲಿ ಮಧ್ಯಾಹ್ನ ದರೋಡೆ ನಡೆದಿದೆ. ಶ್ರೀನಾಥ್ ಪತ್ನಿ ಯೋಗೀಶ್ವರಿ ಕಸ ಎಸೆಯಲು ಹೋದಾಗ ಆಗುಂತಕ ಮನೆ ಒಳಗೆ ಬಂದಿದ್ದಾನೆ. ಆಗ ಯೋಗೀಶ್ವರಿ ಪುತ್ರ ಸಮರ್ಥ್ ನೀವು ಯಾರು' ಎಂದು ಪಶ್ನಿಸಿದಾಗ ಮಗುವಿನ ತಲೆಗೆ ಹೊಡೆದು ಕಿರುಚಾಡದಂತೆ ಹೆದರಿಸಿದ್ದಾನೆ.

ಗಾಬರಿಗೊಂಡ ಬಾಲಕ ಕೊಠಡಿ ಸೇರಿಕೊಂಡಿದೆ. ಇತ್ತ ದರೋಡೆಕೋರ ಮನೆಯಲ್ಲಿ ಅವಿತು ಕುಳಿತಿದ್ದ. ಕಸ ಎಸೆದು ಮನೆಗೆ ಬಂದ ಗೃಹಿಣಿಗೆ ಮಗ ಕಾಣದಿದ್ದಾಗ ಗಾಬರಿಗೊಂಡು ಸಮ್ಮು, ಎಲ್ಲಿದ್ದೀಯಾ' ಎಂದು ಹುಡುಕಾಡಿದ್ದಾರೆ. ಆಗ ಹಿಂಬದಿಯಿಂದ ಬಂದ ದರೋಡೆಕೋರ, ಅವರ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ರಕ್ತಸ್ರಾವದಿಂದ ನರಳುತ್ತಿದ್ದ ಯೋಗೀಶ್ವರಿ ಅವರಿಗೆ 'ಹಣ ಎಲ್ಲಿದೆ ತೋರಿಸು' ಎಂದಾಗ ಅವರು ಬೀರು ತೋರಿಸಿದ್ದಾರೆ. ಅದರಲ್ಲಿದ್ದ 5 ಲಕ್ಷ ರೂ. ದೋಚಿ ಕಾಲ್ಕಿತ್ತಿ ದ್ದಾನೆ.

ದೊಡ್ಡವರು ಹೇಳಿದ್ದಕ್ಕೇ ಕೃತ್ಯ!

ಮಗ ಸಮರ್ಥ ಸ್ನಾಯು ಸಮಸ್ಯೆಗೆ ಒಳಗಾಗಿದ್ದ. ಈ ಕಾರಣಕ್ಕೆ ಆತನಿಗೆ ಎಸೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬುಧವಾರ ಬೆಳಗ್ಗೆ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಕಾಣ ತಪಾಸಣೆ ಮಾಡಿಸಿಕೊಂಡು ಬಂದಿದ್ದರು. ಇದಾದ ಬಳಿಕ ಶ್ರೀನಾಥ್ ಕೆಲಸಕ್ಕೆ ತೆರಳಿದ್ದರು.ಮಗನ ಚಿಕಿತ್ಸೆಗೆಂದೇ ಮನೆಯಲ್ಲಿ 5 ಲಕ್ಷ ರೂ. ಕೂಡಿಟ್ಟಿದ್ದರು. ಹಣ ದೋಚಿ ಹೊರಡುವಾಗ ದರೋಡೆಕೋರ 'ನಾನು ಅವರ ಗೆ ಬ್ಲ್ಯಾಕ್ ಗ್ಯಾಂಗ್‌ನವನು. ನನ್ನ ಹಿಂದೆ ದೊಡ್ಡ ದೊಡ್ಡವರು ಇದ್ದಾರೆ. ಅವರು ಹೇಳಿದ್ದಕ್ಕೆ ಈ ಕೆಲಸ ಮಾಡಿದ್ದೇನೆ. ನಿಮ್ಮ ಮನೆಯವರಿಗೆ ಕರೆ ಮಾಡಿ, ಚಿಕಿತ್ಸೆ ತೆಗೆದುಕೊಳ್ಳಿ' ಎಂದು ಯೋಗೇಶ್ವರಿ ಅವರಿಗೆ ಹೇಳಿದ್ದಾನೆ ಎಂದು ಅವರ ಪತಿ ಶ್ರೀನಾಥ್ ವಿಜಯವಾಣಿಗೆ ತಿಳಿಸಿದ್ದಾರೆ.

ಕಪ್ಪುಬಣ್ಣವೇ ಇವರ ಸಂಕೇತ?

ಮನೆಗೆ ನುಗ್ಗಿದ ದರೋಡೆಕೋರ ತಾನು ಬ್ಲ್ಯಾಕ್ ಗ್ಯಾಂಗ್‌ಗೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ. ಕಪ್ಪು ಬಣ್ಣದ ಟಿ ಶರ್ಟ್, ಪ್ಯಾಂಟ್, ತಲೆಗೆ ಟೋಪಿ ಹಾಕಿದ್ದ. ಹೊರಗೆ ಬರುವಾಗ ಮುಖಕ್ಕೆ ಟಿ ಶರ್ಟ್ನ ಸ್ಕಾರ್ಫ್ ಧರಿಸಿದ್ದ. ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರಿಂದ ಬ್ಲ್ಯಾಕ್‌ ಗ್ಯಾಂಗ್ ಎಂದು ಹೇಳಿರಬಹುದು ಎನ್ನಲಾಗಿದೆ.

ಮನೆಗೆ ಹೋಗುವಾಗಲೇ ದರೋಡೆಕೋರ ಕಲ್ಲನ್ನು ತನ್ನೊಂದಿಗೆ ಒಯ್ದಿದ್ದ ಎನ್ನಲಾಗಿದೆ. ಒಂಟಿ ಮಹಿಳೆಯರಿರುವ ಮನೆಗಳತ್ತ ಈ ಗ್ಯಾಂಗ್ ಕೆಲಸ ಮಾಡುತ್ತಿದೆ ಯೇ ಎಂಬುದು ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net