ದಸರಾ ವಿವಾದದಿಂದ ಟೂರಿಸಂಗೆ ಪೆಟ್ಟು

Published on

ಮಂಜುನಾಥ ತಿಮ್ಮಯ್ಯ ಮೈಸೂರು

ವಿಶ್ವವಿಖ್ಯಾತ ದಸರಾ ಮಹೋತ್ಸವ ಪ್ರತಿ ಸಲ ಮೈಸೂರು ಪ್ರವಾಸೋದ್ಯಮಕ್ಕೆ ನವಚೈತನ್ಯ ಉಣಬಡಿಸುತ್ತಿದೆ. ಆದರೆ ಈ ಸಲ ನಾಡಹಬ್ಬಕ್ಕೆ ಸಂಬಂಧಿಸಿದ ವಿವಾದ, ಗದ್ದಲು ಈ ಕ್ಷೇತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಇದುವೇ ನಿರಾಸೆ ಮೂಡಿಸುತ್ತಿದೆ.

ದಸರಾವು ಈ ಬಾರಿ ಪ್ರವಾಸೋದ್ಯಮಕ್ಕೆ ಜೀವಕಳೆ ಬದಲು ನಿರಾಸಕ್ತಿ ಮೂಡಿಸುತ್ತಿದೆ. ಈ ಕ್ಷೇತ್ರದ ಮೇಲೆ ಅವಲಂಬನೆಯಾಗಿರುವ ಜನರ ಮುಖದಲ್ಲಿ ಮಂದಹಾಸದ ಬದಲು ಆಶಾಭಂಗ ಉಂಟು ಮಾಡುತ್ತಿದೆ. ಇದಕ್ಕೆಲ್ಲ ಕಾರಣ ಅನಗತ್ಯ ವಿವಾದಗಳು...!

ಪ್ರಸಕ್ತ ಸಾಲಿನ ದಸರಾ ಉದ್ಘಾಟನೆಗೆ ಬುಕರ್ ಪ್ರಶಸ್ತಿ ಪುರಸ್ಕೃತೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಲಾಗಿದೆ. ಇದುವೇ ವಿವಾದ ಸ್ವರೂಪ ಪಡೆದುಕೊಂಡಿದೆ. ಇದೆಲ್ಲವೂ ಅಗತ್ಯವೇ ಇರಲಿಲ್ಲ. ಏಕೆ ಈ ವಿಷಯವನ್ನು ಇಟ್ಟುಕೊಂಡು ದೊಡ್ಡದು ಮಾಡಿದರೋ? ಅಲ್ಲದೆ ಆರೋಪ-ಪ್ರತ್ಯಾರೋಪಗಳ ಸುರಿಮಳೆಯೂ ಇನ್ನೂ ನಿಂತಿಲ್ಲ. ಪರ-ವಿರೋಧ ಪ್ರತಿಭಟನೆಗಳು ಆರ್ಭಟಿಸಿವೆ. ಎರಡು ಕಡೆಯಿಂದ ಕೈಗೊಂಡಿದ್ದ ಚಾಮುಂಡಿ ಚಲೋ ವಿಫಲವಾದರೂ ಸಹ ಹೆಚ್ಚು ಸದ್ದು ಮಾಡಿತು. ಈ ಸಂದರ್ಭದಲ್ಲಿ ಖಾಕಿ ಬಂದೋಬಸ್ತ್ ಕಂಡು ಸಾರ್ವಜನಿಕರು, ಪ್ರವಾಸಿಗರು ಬೆಚ್ಚಿ ಬೀಳುವಂತಾಯಿತು.

ಜತೆಗೆ ರಾಜಕಾರಣಿಗಳು ತಮ್ಮ ಬೆಳೆ ಬೇಯಿಸಿಕೊಳ್ಳಲು ತಮ್ಮ ನಾಲಗೆಯನ್ನು ಇನ್ನಷ್ಟು ಹರಿಬಿಡುವ ಮೂಲಕ ಹೊಸ ವಿವಾದಗಳನ್ನು ಸೃಷ್ಟಿಸಿ ಗೊಂದಲ ಮೂಡಿಸಿದ್ದಾರೆ. ಹೀಗಾಗಿ, ಕಳೆದ 15-20 ದಿನಗಳಿಂದ ದಸರಾ ಒಳ್ಳೆಯ ಕಾರಣಕ್ಕೆ ಸುದ್ದಿಯಾಗುತ್ತಿಲ್ಲ. ಬರೀ ಕೆಟ್ಟ ಸುದ್ದಿಗಳಿಗೆ ಆಹಾರವಾಗುತ್ತಿದೆ. ಜತೆಗೆ ಧನಾತ್ಮಕ ಸಂಗತಿಗಳಿಗಿಂತ ಋಣಾತ್ಮಕ ವಿಷಯಗಳೇ ಹೆಚ್ಚು ಮಾರ್ದನಿಸುತ್ತಿದೆ. ಇದರಿಂದ ಪ್ರವಾಸರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಪ್ರವಾಸೋದ್ಯಮ ಕ್ಷೇತ್ರದವರ ಆತಂಕವಾಗಿದೆ.

ದಸರಾ ಸಂದರ್ಭದಲ್ಲಿ ಬಿಗಿ ಭದ್ರತೆ ಕಲ್ಪಿಸುವುದು ಆದ್ಯ ಕರ್ತವ್ಯ. ಆದರೆ ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯಂತಹ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಅದಕ್ಕಾಗಿ ಪೊಲೀಸ್ ಇಲಾಖೆ ರೂಪಿಸಿರುವ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ನಾಡಹಬ್ಬದಲ್ಲೂ ಪಾಲಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುವುದು ಸಹ ಪ್ರವಾಸಿಗರ ಮನಸ್ಸನ್ನು ಗಲಿಬಿಲಿಗೊಳಿಸಿದೆ.

ಹೀಗಾಗಿ, ಅವರಲ್ಲಿ ‘ಸಮಸ್ಯೆ ಎದುರಿಸಲು ನಾವು ಏಕೆ ಮೈಸೂರಿಗೆ ಹೋಗಬೇಕು?’ ಎಂಬ ಭಾವನೆ ಬರುತ್ತದೆ. ಅಗತ್ಯ ಕ್ರಮ ತೆಗೆದುಕೊಳ್ಳಿ. ಆದರೆ, ಅದಕ್ಕೆ ಬೇರೊಂದು ಘಟನೆಯನ್ನು ಥಳಕು ಹಾಕಬೇಡಿ ಎಂಬುದು ಹೋಟೆಲ್ ಮಾಲೀಕರೊಬ್ಬರ ಸಲಹೆಯಾಗಿದೆ.

ಈ ರೀತಿಯ ವಿವಾದಗಳು ಪ್ರವಾಸೋದ್ಯಮ ಮೇಲೆ ಪರಿಣಾಮ ಬೀರುತ್ತಿವೆ. ದಸರಾಕ್ಕೆ ಇನ್ನೂ 10 ದಿನಗಳು ಮಾತ್ರ ಉಳಿದಿದೆ. ಆದರೆ ಈವರೆಗೆ ಶೇ.25ರಷ್ಟು ಕೂಡ ಹೋಟೆಲ್‌ಗಳ ರೂಮ್ ಬುಕ್ಕಿಂಗ್ ಆಗಿಲ್ಲ. ಹೀಗಾದರೆ ಏನು ಮಾಡೋದು? ಇಷ್ಟು ಹೊತ್ತಿಗಾಗಲೇ ಆನ್‌ಲೈನ್ ಮೂಲಕ ಶೇ.70-80ರಷ್ಟು ಬುಕ್ಕಿಂಗ್ ಆಗುತ್ತಿದ್ದವು. ಆದರೆ ಈ ಬಾರಿ ಯಾಕೋ ಪ್ರವಾಸಿಗರು ಮೈಸೂರು ಕಡೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆಯೇ? ಎಂಬ ಅನುಮಾನ ಮೂಡುತ್ತಿದೆ ಎಂದು ಹೇಳಿದರು.

ಯಾವುದೇ ಜನರು ಏಕಾಏಕಿ ಪ್ರವಾಸಕ್ಕೆ ಬರಲ್ಲ. ಅವರು 2-3 ತಿಂಗಳು ಮುನ್ನವೇ ಯೋಜನೆ ರೂಪಿಸಿಕೊಳ್ಳುತ್ತಾರೆ. ಈ ರೀತಿ ವಿವಾದಗಳು ಹೆಚ್ಚು ಸದ್ದು ಮಾಡಿದರೆ, ಮೈಸೂರಿಗೆ ಬರುವವರೂ ಬರಲ್ಲ. ಪಕ್ಕದ ತಮಿಳುನಾಡು, ಕೇರಳ ರಾಜ್ಯದ ಪ್ರವಾಸಕ್ಕೆ ತೆರಳುತ್ತಾರೆ. ಇದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟವಾಗಲಿದೆ ಎಂಬ ಆತಂಕದ ಮಾತುಗಳು ವ್ಯಕ್ತವಾಗುತ್ತಿದೆ.

ದಸರಾ ಕೇವಲ ಸಾಂಸ್ಕೃತಿಕ, ಧಾರ್ಮಿಕ ಉತ್ಸವವಲ್ಲ. ಅದರಾಚೆಯೂ ದೊಡ್ಡ ಮಟ್ಟದ ಆರ್ಥಿಕ ಲೆಕ್ಕಾಚಾರವೂ ಅಡಗಿದೆ. ವರ್ಷದಲ್ಲಿ ಆರು ತಿಂಗಳ ಕಾಲ ಆರ್ಥಿಕ ಚಟುವಟಿಕೆಯನ್ನು ಇದು ಹಿಡಿದಿಟ್ಟುಕೊಳ್ಳುತ್ತದೆ. ಸೆಪ್ಟಂಬರ್‌ನಿಂದ ಡಿಸೆಂಬರ್‌ವರೆಗೆ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದಕ್ಕಿದೆ. ಹೀಗಾಗಿ, ಟೂರಿಸಂಗೆ ಸಂಬಂಧಿಸಿದ ವ್ಯಾಪಾರಕ್ಕೆ ವರ್ಷದಲ್ಲೇ ಗರಿಷ್ಠ ವಹಿವಾಟಿನ ‘ಸೀಜನ್’ ಇದಾಗಿದೆ. ಇದು ಕೈ ತಪ್ಪಿದರೆ ಮುಂದಿನ ವರ್ಷ ಏಪ್ರಿಲ್, ಮೇ ತಿಂಗಳ ತನಕ ಕಾಯಬೇಕಾಗುತ್ತದೆ.

ಆದ್ದರಿಂದ ಮೈಸೂರು ಪ್ರವಾಸೋದ್ಯಮಕ್ಕೆ ಕಲ್ಲು ಹಾಕುವ ಕೆಲಸ ಮಾಡಬಾರದು. ಇದಕ್ಕೆ ಚೈತನ್ಯ ಕೊಡುವ ದಸರಾವನ್ನು ವಿವಾದರಹಿತಗೊಳಿಸಬೇಕು.

ರಾಜಕಾರಣಿಗಳು ಇದರಲ್ಲಿ ರಾಜಕೀಯ ಮಾಡಬಾರದು. ದಸರಾವನ್ನು ಬಹಳಷ್ಟು ಅಚ್ಚುಕಟ್ಟಾಗಿ, ಯೋಜನಾಬದ್ಧವಾಗಿ, ವ್ಯವಸ್ಥಿತವಾಗಿ ರೂಪಿಸಬೇಕು. ಆಗಲೇ ಮೈಸೂರಿಗೆ ಕೀರ್ತಿ ಬರಲಿದೆ. ಪ್ರವಾಸಿಗರ ದಂಡು ಸಹ ಹರಿದು ಬರಲಿದೆ. ಆದರೆ ಈ ಕುರಿತು ಯಾರೂ ಯೋಚಿಸುತ್ತಿಲ್ಲ. ಬದಲಿಗೆ ರಾಜಕೀಯ ದಸರಾವನ್ನು ಹಾಳು ಮಾಡುತ್ತಿದೆ ಎಂಬ ಅಸಮಾಧಾನ ಪ್ರವಾಸೋದ್ಯಮ ಕ್ಷೇತ್ರದವರಲ್ಲಿ ವ್ಯಕ್ತವಾಗುತ್ತಿದೆ.

ಎಲ್ಲರಿಗೂ ಶುಕ್ರದೆಸೆ ಕಾಲ

ದಸರಾ ಟೂರಿಸಂ ಅನ್ನು ನಗರದಲ್ಲಿ 50 ಸಾವಿರ ಕುಟುಂಬಗಳು ಅವಲಂಬಿಸಿವೆ. ಕಡ್ಲೆಕಾಯಿ, ಸೌತೆಕಾಯಿ ಮಾರುವವರಿಂದ ಹಿಡಿದು ಟಾಂಗಾ, ರಿಕ್ಷಾ, ಟ್ಯಾಕ್ಸಿ, ಹೋಟೆಲ್ ಮಾಲೀಕರು, ಮಾಣಿಗಳು, ಮಾರ್ಗದರ್ಶಿಗಳಿಗೆ ಶುಕ್ರದೆಸೆ ಕಾಲ ಇದು. ಕೆಳ ಹಂತದಿಂದ ಹಿಡಿದ ಮೇಲ್ವರ್ಗದವರೆಗೆ ಒಂದಕ್ಕೊಂದು ಸಂಬಂಧವಿರುವ ಈ ಆರ್ಥಿಕ ಸರಪಳಿಯಿಂದಾಗಿ ಈ ಕ್ಷೇತ್ರದ ಪ್ರತಿಯೊಬ್ಬರ ಜೇಬು ಭರ್ತಿಯಾಗುತ್ತದೆ.

ರೈತರಿಗೆ ಮತ್ತು ಗ್ರಾಮಾಂತರ ಪ್ರದೇಶದವರಿಗೆ ದಸರಾ ಆದಾಯ ಮೂಲ. ಈ ವೇಳೆ ನಗರದ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುವುದರಿಂದ ಹಳ್ಳಿಗರ ಹೊಟ್ಟೆಯೂ ತುಂಬಲಿದೆ. ತರಕಾರಿ, ಹಣ್ಣು, ಹೂ ಸೇರಿದಂತೆ ಪ್ರತಿಯೊಂದು ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬರಲಿದೆ. ಇದರಿಂದ ನಿರೀಕ್ಷೆ ಮೀರಿ ಆದಾಯ ಬರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಿದೆ.

ಪ್ರವಾಸಿಗರಿಗೆ ಹರ್ಷ

ದಸರಾವು ಮೈಸೂರಿಗಷ್ಟೇ ಅಲ್ಲ, ಇಡೀ ರಾಜ್ಯದ ಪ್ರವಾಸೋದ್ಯಮಕ್ಕೆ ಜೀವಕಳೆ ತುಂಬುತ್ತದೆ. ದಸರಾದೊಂದಿಗೆ ಅರಮನೆ, ಮೃಗಾಲಯ, ಕಾರಂಜಿಕೆರೆ ಉದ್ಯಾನ, ಚಾಮುಂಡಿಬೆಟ್ಟ ಭೇಟಿ ನೀಡುವ ಪ್ರವಾಸಿಗರು, ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟೆ, ರಂಗನತಿಟ್ಟು ಪಕ್ಷಿಧಾಮ, ಮೇಲುಕೋಟೆ, ವನ್ಯಜೀವಿಗಳ ತಾಣ ಬಂಡೀಪುರ, ನಾಗರಹೊಳೆ, ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಿಗೂ ಲಗ್ಗೆ ಇಡುತ್ತಾರೆ.

ಇದರಿಂದ ಆ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳೂ ಗರಿಗೆದರುತ್ತವೆ. ಇಲ್ಲಿಗೆ ಬರುವವರು ಬೆಂಗಳೂರು ಕಡೆ, ಉತ್ತರ ಕರ್ನಾಟಕದ ಹಂಪಿ, ಪಟ್ಟದಕಲ್ಲು, ಕರಾವಳಿ ಪ್ರದೇಶಗಳ ಧಾರ್ಮಿಕ ಕ್ಷೇತ್ರಗಳು, ಹೈದ್ರಾಬಾದ್ ಕರ್ನಾಟಕದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸೋದ್ಯಮಕ್ಕೆ ಜೀವಂತಿಕೆ ತುಂಬುತ್ತಾರೆ.

ದಸರಾ ಉದ್ಘಾಟಕರ ಆಯ್ಕೆಯೇ ಚರ್ಚಾ ವಿಷಯವಲ್ಲ. ಅದನ್ನು ವಿವಾದ ಮಾಡಿ ರಾಜಕೀಯಗೊಳಿಸಲಾಗಿದೆ. ಇದೆಲ್ಲ ಬೇಕಿರಲಿಲ್ಲ. ಇದರಿಂದ ಪ್ರವಾಸೋದ್ಯಮ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಪ್ರವಾಸಿಗರು ಮೈಸೂರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈವರೆಗೆ ಶೇ.25ರಷ್ಟು ರೂಮ್‌ಗಳು ಬುಕ್ಕಿಂಗ್ ಆಗಿಲ್ಲ. ಇಂತಹ ಅನಗತ್ಯ ವಿಷಯದಿಂದ ಮೈಸೂರು ಪ್ರವಾಸೋದ್ಯಮಕ್ಕೆ ನಷ್ಟವಾಗಲಿದೆ.ರವೀಂದ್ರ ಭಟ್, ಕಾರ್ಯದರ್ಶಿಮೈಸೂರು ಹೋಟೆಲ್ ಮಾಲೀಕರ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net