

ವಿಶ್ವವಿಖ್ಯಾತ ನಾಡಹಬ್ಬ ದಸರಾ ಪ್ರಯುಕ್ತ ಸಾಂಸ್ಕೃತಿಕ ನಗರಿ ಮೈಸೂರಿನ ಎಲ್ಲೆಡೆ ಅಳವಡಿಸಿದ್ದ ವಿದ್ಯುತ್ ದೀಪಾಲಂಕಾರ ಭಾನುವಾರ ಸಮಾಪ್ತಿಗೊಂಡಿತು.
ದೀಪಾಲಂಕಾರವನ್ನು ಈ ಬಾರಿ ಹಿಂದಿನಿಗಿಂತಲೂ ಆಕರ್ಷಕ, ಅದ್ದೂರಿಯಾಗಿ ಮಾಡಲಾಗಿತ್ತು. ಈ ಬಾರಿ ರೂಪಿಸಿದ ಹಲವು ಹೊಸ ವಿನ್ಯಾಸಗಳು ಜನರನ್ನು ಆಕರ್ಷಿಸಿದವು. ಒಟ್ಟು 21 ದಿನಗಳ ಕಾಲ ನಗರದ ಮೆರಗು ಹೆಚ್ಚಿಸಿದ ದೀಪಾಲಂಕಾರವನ್ನು ಲಕ್ಷಾಂತರ ಜನ ಕಣ್ತುಂಬಿಕೊಂಡರು.
ಈ ಬಾರಿ ನಗರದ ವಿವಿಧ ರಸ್ತೆಗಳಲ್ಲಿ ಒಟ್ಟು 136 ಕಿ.ಮೀ.ವರೆಗೆ ದೀಪಾಲಂಕಾರ ಮಾಡಲಾಗಿತ್ತು. ಅದೇ ರೀತಿ ಒಟ್ಟು 118 ವೃತ್ತಗಳನ್ನು ದೀಪಾಲಂಕಾರ ಮಾಡಲಾಗಿತ್ತು. 60 ವಿವಿಧ ಆಕೃತಿಗಳನ್ನು ನಿರ್ಮಾಣ ಮಾಡಿ ವಿದ್ಯುತ್ ದೀಪಾಲಂಕಾರ ಮಾಡಿದ್ದು ಎಲ್ಲರ ಗಮನ ಸೆಳೆಯಿತು. ನಗರದ ಪ್ರಮುಖ ತಾಣವಾಗಿರುವ ದೊಡ್ಡಕೆರೆ ಮೈದಾನ, ಗನ್‌ಹೌಸ್ ವೃತ್ತ, ರಾಮಸ್ವಾಮಿ ವೃತ್ತ, ಕೌಟಿಲ್ಯ ವೃತ್ತ, ಎಲ್‌ಐಸಿ ಕಚೇರಿ ವೃತ್ತ, ಮುಡಾ ವೃತ್ತ, ದೇವರಾಜ ಅರಸು ರಸ್ತೆ, ಜೆಎಲ್‌ಬಿ ರಸ್ತೆ ಜಂಕ್ಷನ್, ರೈಲ್ವೆ ನಿಲ್ದಾಣದ ವೃತ್ತ, ಚಲುವಾಂಬ ಆಸ್ಪತ್ರೆ ವೃತ್ತ, ಸರ್ಕಾರಿ ಆಯುರ್ವೇದ ಕಾಲೇಜು ವೃತ್ತ, ಹೈವೇ ವೃತ್ತ, ಫೌಂಟೇನ್ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ವರ್ಣರಂಜಿತ ಲೈಟ್‌ಗಳಿಂದ ವಿವಿಧ ಆಕೃತಿ ನಿರ್ಮಿಸಲಾಗಿತ್ತು.
ದೀಪಾಲಂಕಾರದ ಮೆರುಗು ಹೆಚ್ಚಿಸಲು ಈ ಸಲ ಹೊರ ರಾಜ್ಯಗಳಿಂದ ಅತ್ಯಾಕರ್ಷಕ ವಿದ್ಯುತ್ ಬಲ್ಬ್ ತರಿಸಿ ಅಳವಡಿಸಿದ್ದು ವಿಶೇಷ ಎನಿಸಿತ್ತು. ಸದರಿ ಈ ಲೈಟ್‌ಗಳಿಂದ ತ್ರಿವರ್ಣ ಧ್ವಜ ಹಾರಾಡುವಂತೆ, ವಾಹನಗಳ ಆಕೃತಿಯಲ್ಲಿ ಚಕ್ರಗಳು ಚಲಿಸುವಂತೆ, ವಿವಿಧ ಗೊಂಬೆ ಆಕೃತಿಗಳು ಚಲನಶೀಲತೆಯಿಂದ ಕಂಡು ಬಂದವು. ಈ ಬಾರಿ ವಿದ್ಯುತ್ ದೀಪಾಲಂಕಾರದಲ್ಲಿ ಲಕ್ಷಾಂತರ ಬಲ್ಬ್ ಬೆಳಗಿದ್ದರಿಂದ 2.50 ಲಕ್ಷ ಯೂನಿಟ್ ವಿದ್ಯುತ್ ಖರ್ಚಾಗಿದೆ ಎನ್ನಲಾಗಿದೆ. ಒಟ್ಟಾರೆ ದೀಪಾಲಂಕಾರಕ್ಕೆ 6 ಕೋಟಿ ರೂ. ಖರ್ಚು ಮಾಡಲಾಗಿದೆ. ಕಳೆದ ಬಾರಿ 6.15 ಕೋಟಿ ರೂ. ವೆಚ್ಚ ಮಾಡಲಾಗಿತ್ತು.
ಅಂತಿಮ ದಿನವೂ ಸಾವಿರಾರು ಜನರಿಂದ ವೀಕ್ಷಣೆ
ಕಡೆಯ ದಿನವೂ ಸಾವಿರಾರು ಸಂಖ್ಯೆಯಲ್ಲಿ ಜನರು ಬೆಳಕಿನ ವೈಭವವನ್ನು ಕಣ್ತುಂಬಿಕೊಂಡರು. ದೀಪಾಲಂಕಾರ ವೀಕ್ಷಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಹೃದಯ ಭಾಗದ ಬಹುತೇಕ ರಸ್ತೆಗಳು ಟ್ರಾಫಿಕ್ ಸಮಸ್ಯೆಯನ್ನು ಎದುರಿಸಿತು. ಟ್ರಾಫಿಕ್ ಸಮಸ್ಯೆಯ ನಡುವೆಯೂ ಜನರು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಿ ಸಂಭ್ರಮಿಸಿದರು. ನಗರದ ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಬಿ.ಎನ್. ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಸಯ್ಯಜಿರಾವ್ ರಸ್ತೆ, ಕೃಷ್ಣರಾಜ ಬುಲೇವಾರ್ಡ್ ರಸ್ತೆ ಹಾಗೂ ಅರಮನೆ ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚಿನ ಜನ ಹಾಗೂ ವಾಹನ ದಟ್ಟಣೆ ಕಂಡು ಬಂತು. ಜನರು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ತೆರಳಲು ಸಾಕಷ್ಟು ಹರಸಾಹಸಪಟ್ಟರು.
ಜನರಿಂದ ಸೆಲ್ಫಿ : ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳ ಮುಂದೆ ಜನರು ನಿಂತು ಸೆಲ್ಫಿಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂತು. ಸಾಕಷ್ಟು ಜನರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ದಸರಾದ ಬೆಳಕಿನ ವೈಭವವನ್ನು ಹಂಚಿಕೊಂಡರು. ಈ ಬಾರಿ ದೀಪಾಲಂಕಾರವು ಸಾಕಷ್ಟು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.