ದಸರಾ ನೆಪದಲ್ಲಿ ರಾಜ್ಯ ಸರ್ಕಾರದಿಂದ ಲೂಟಿ

dasara_ police band (2)
Published on

ಈ ಬಾರಿಯ ದಸರಾದಲ್ಲಿ ರಾಜ್ಯ ಸರ್ಕಾರ ಲೂಟಿ ಮಾಡಿದ್ದು, ಈ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಏರ್ ಶೋ ಟಿಕೆಟ್‌ನಲ್ಲಿ ಲೂಟಿ ಮಾಡಿದೆ. ದಸರಾ ಗೋಲ್ಡ್‌ಪಾಸ್‌ನಲ್ಲಿಯೂ ಲೂಟಿ ಮಾಡಿದೆ. ಯುವ ದಸರಾ ಹೆಸರಿನಲ್ಲಿ ಲೂಟಿ ನಡೆಸಿದೆ. ದೀಪಾಲಂಕಾರ, ಫಲಪುಷ್ಪ ಪ್ರದರ್ಶನದ ದುಬಾರಿ ಟಿಕೆಟ್‌ನಲ್ಲಿ ಲೂಟಿಯಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಅವರ ಕುಟುಂಬಸ್ಥರಿಂದ ಸರ್ಕಾರಿ ವಾಹನಗಳ ದುರ್ಬಳಕೆ ಆಗಿದೆ. ಅವರೆಲ್ಲರಿಗೂ ವಿವಿಐಪಿ ಕೋಟಾ ಅಡಿ ಉಚಿತವಾಗಿ ಬಿಡಲಾಗಿದೆ. ವಿಶೇಷ ಸವಲತ್ತು ಒದಗಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳಾಗಲಿ ಅಥವಾ ನಗರ ಪೊಲೀಸ್ ಆಯುಕ್ತರಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಬೆಂಬಲಿಗರ ವೈಯಕ್ತಿಕ ಕಾರ್ಯಕ್ರಮವೋ? ಸರ್ಕಾರದಿಂದ ನಡೆಸುವ ಜನ ಸಾಮಾನ್ಯರ ದಸರಾವೋ? ಎಂಬುದು ಸಾರ್ವಜನಿಕರ ಪ್ರಶ್ನೆ. ಅದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು. ದಸರಾ ಖರ್ಚು ವೆಚ್ಚದ ಬಗ್ಗೆ ಪಾರದರ್ಶಕವಾಗಿ ಸಾರ್ವಜನಿಕ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.

ಪಕ್ಷದ ನಗರಾಧ್ಯಕ್ಷ ನಾಗೇಂದ್ರ, ನಾಗರಾಜು, ರವಿ, ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net