

ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಸುಮಾರು 150ಕ್ಕೂ ಹೆಚ್ಚು ಹೆಣ್ಣು ಮಕ್ಕಳು, ಮಹಿಳೆಯರ ಅತ್ಯಾಚಾರ, ಕೊಲೆ, ಕಾನೂನುಬಾಹಿರ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸಿ, ಸಂತ್ರಸ್ತರಿಗೆ ಸೂಕ್ತ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪುರಭವನ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ವ್ಯಕ್ತಿಯೊಬ್ಬ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಅತ್ಯಾಚಾರ, ಹತ್ಯೆಗಳಂತಹ ಅಪರಾಧ ಕೃತ್ಯಗಳ ಮಾಹಿತಿ ಇರುವುದಾಗಿ ತಿಳಿಸಿದ್ದು, ತನಗೆ ಜೀವ ಬೆದರಿಕೆಯೊಡ್ಡಿ ಮೃತದೇಹಗಳನ್ನು ವಿಲೇವಾರಿ ಮಾಡಿಸಿದ್ದಾರೆ ಎಂದು ಜು.3ರಂದು ದೂರು ನೀಡಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳ ಹಿನ್ನೆಲೆ ಇರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ದೂರು ಬಂದರೂ ಸರ್ಕಾರ ನಿಷ್ಪಕ್ಷಪಾತ ತನಿಖೆ ಮಾಡಿ, ಶಿಕ್ಷ ಕೊಡಿಸದೆ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಕಿಡಿಕಾರಿದರು.
ಸೌಜನ್ಯ ಪ್ರಕರಣದಲ್ಲಿ ಸಂತೋಷ್‌ರಾವ್ ನಿರ್ದೋಷಿ ಎಂದು ತೀರ್ಪು ನೀಡಿದೆ. ಹಾಗಾದರೆ ನಿಜವಾದ ಆರೋಪಿಗಳ್ಯಾರು? ಸಂತೋಷ್‌ರಾವ್‌ನನ್ನು ಹಿಡಿದು ತಂದ ರವಿಪೂಜಾರಿ, ವಾರಿಜಆಚಾರಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು? ತನಿಖೆಯಲ್ಲಿ ಉದ್ದೇಶಪೂರ್ವಕವಾಗಿ ಲೋಪ ಎಸಗಿರುವ ತನಿಖಾಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ನೂರಾರು ಅಸಹಜ ಸಾವುಗಳ ಹಿಂದೆ ಯಾರಿದ್ದಾರೆ ಎಂಬ ಪ್ರಶ್ನೆಗಳ ಸರ್ಕಾರವೇ ಉತ್ತರಿಸಬೇಕು. ಅಪರಾಧ ಕೃತ್ಯಗಳ ಮಾಹಿತಿ ನೀಡಲು ಮುಂದೆ ಬಂದಿರುವ ವ್ಯಕ್ತಿಯ ಕುಟುಂಬಕ್ಕೆ ರಕ್ಷಣೆ ನೀಡಿ, ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ, ಕೆ.ವಿ.ದೇವೇಂದ್ರ, ಕಿರಂಗೂರು ಸ್ವಾಮಿ, ಹಾರೋಹಳ್ಳಿ ನಟರಾಜು, ಶಿವಮೂರ್ತಿ ಶಂಕರಪುರ, ಸಣ್ಣಯ್ಯ ಲಕ್ಕೂರು ಸೇರಿದಂತೆ ಹಲವರು ಭಾಗವಹಿಸಿದ್ದರು.