ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

4
Published on

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಯತ್ನಿಸಿದ ಖಂಡಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ವಕೀಲ ಡಾ.ರಾಕೇಶ್ ಕಿಶೋರ್ ಮೊಘಲರ ಕಾಲದಲ್ಲಿ ಭಗ್ನಗೊಂಡ ದೇವಾಲಯವೊಂದರಲ್ಲಿ ವಿಷ್ಣುಮೂರ್ತಿಯ ಮರು ನವೀಕರಣಕ್ಕೆ ಆದೇಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಈ ವಿಚಾರದಲ್ಲಿ ನ್ಯಾಯಾಧೀಶ ಬಿ.ಆರ್.ಗವಾಯಿ ಈ ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದನ್ನು ಆರ್ಕಿಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ ಇಲಾಖೆಯಡಿ ಪರಿಹರಿಸಿಕೊಳ್ಳಿ ಎಂದು ಹೇಳಿದ್ದರು. ಇದರಿಂದ ಕುಪಿತಗೊಂಡ ರಾಕೇಶ್ ಕಿಶೋರ್ ನ್ಯಾಯಾಧೀಶರತ್ತ ಶೂ ತೂರಿರುವುದು ಅಕ್ಷಮ್ಯ ಅಪರಾಧ. ಈ ಸಂದರ್ಭದಲ್ಲಿ ತನ್ನ ರಕ್ಷಣೆಗಾಗಿ ಸನಾತನ ಎಂಬ ಪದ ಬಳಕೆ ಮಾಡಿಕೊಂಡು ಧರ್ಮದ ಲೇಪಹಚ್ಚಿ ಈ ರೀತಿಯ ಕೃತ್ಯ ಎಸಗಿರುವ ವಕೀಲರು ಪಶ್ಚಾತಾಪಪಡುವ ಬದಲಿಗೆ ಈ ಕೃತ್ಯಕ್ಕೆ ದೇವರ ಪ್ರೇರೇಪಣೆ ಇದೆ ಎಂದು ಸಂದರ್ಶನವೊಂದರಲ್ಲಿ ಸಮರ್ಥಿಸಿಕೊಂಡಿರುವುದು ಖಂಡನೀಯ ಎಂದು ಕಿಡಿಕಾರಿದರು.

ಭಾರತ ದೇಶ ಬುಲ್ಡೋಜರ್ ನಿಯಮದಿಂದ ನಡೆಯುವುದಿಲ್ಲ. ಬದಲಾಗಿ ಸಂವಿಧಾನದಡಿಯಲ್ಲಿ ಕಾನೂನಾತ್ಮಕವಾಗಿ ನಡೆಯುತ್ತಿದೆ ಎಂಬ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಹೇಳಿಕೆ ಧಿಕ್ಕರಿಸಿರುವ ರಾಕೇಶ್ ಕಿಶೋರ್ ವಿಕೃತ ಮನಸ್ಸಿನವರಾಗಿರುವುದರಿಂದ ಇದೊಂದು ಆಕಸ್ಮಿಕ ಪ್ರಕರಣವಾಗಿರದೆ ಪೂರ್ವಯೋಜಿತ ಕೃತ್ಯ ಎಂಬುದು ಸ್ಪಷ್ಟವಾಗಿದೆ. ಈ ಕೃತ್ಯ ದಲಿತ ಸಮುದಾಯದ ವ್ಯಕ್ತಿಗಳು ಉನ್ನತ ಹುದ್ದೆಯಲ್ಲಿರುವುದನ್ನು ಸನಾತನವಾದಿಗಳು ಸಹಿಸಿಕೊಳ್ಳುವುದಿಲ್ಲ ಎಂಬುದನ್ನು ಸಾಬೀತುಪಡಿಸಿದಂತಾಗಿದೆ. ದೇಶದ ಪರಮೋಚ್ಚ ನ್ಯಾಯಾಲಯದಲ್ಲಿಯೇ ಈ ರೀತಿ ನಡೆದರೆ ಕುಗ್ರಾಮಗಳಲ್ಲಿ ಅಸ್ಪೃಶ್ಯರ ಸ್ಥಿತಿ ಹೇಗಿರಬೇಡ? ಎಂದರು ಕಿಡಿಕಾರಿದರು.

ನ್ಯಾಯಾಲಯದ ಘನತೆಗೆ ಧಕ್ಕೆ ತಂದಿರುವ ವಕೀಲ ರಾಕೇಶ್ ಕಿಶೋರ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಶಿಕ್ಷೆಗೆ ಒಳಪಡಿಸಬೇಕು. ಇವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ದೇಶದ ಏಕತೆ, ಅಭಿವೃದ್ಧಿ, ಭದ್ರತೆಯ ಪರವಾಗಿರುವವರನ್ನು ಕಾಪಾಡುವ ದೃಷ್ಟಿಯಿಂದ ಸರ್ವಾಧಿಕಾರ ನಡೆಸುತ್ತಿರುವ ಕೇಂದ್ರ ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ಆಲಗೂಡು ಶಿವಕುಮಾರ್, ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಬಿಡಿ ಶಿವಬುದ್ಧಿ, ಮಹೇಶ್ ಮಲಾರ, ರಾಜು ಕುಕ್ಕೂರು, ರಾಮಕೃಷ್ಣ ಅತ್ತಿಕುಪ್ಪೆ, ಯಡದೊರೆ ಮಹದೇವಯ್ಯ, ಕೆ.ವಿ.ದೇವೇಂದ್ರ, ಮಂಜು ಶಂಕರಪುರ, ಮಹೇಶ್ ಗಟ್ಟವಾಡಿ, ಮಹದೇವಮ್ಮ, ತಿಮ್ಮೇಗೌಡ, ಕಿರಂಗೂರು ಸ್ವಾಮಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net