

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳಿಗೆ 2024ನೇ ಇಸವಿ ಸಾಕ್ಷಿಯಾಯಿತು.
ಪ್ರಮುಖವಾಗಿ ನಗರದ ರೇಣುಕಸ್ವಾಮಿ ಹತ್ಯೆ, ಈ ಸಂಬಂದ ಬಂಧಿತರಾಗಿದ್ದ ನಟ ದರ್ಶನ್ ಮತ್ತಿತರರ ಆರೋಪಿಗಳಿಗೆ ಜಾಮೀನು ದೊರೆಯಿತು. ಪೋಕ್ಸೋ ಪ್ರಕರಣ ಎದುರಿಸುತ್ತಿರುವ ಮುರುಘಾ ಶರಣರಿಗೆ ಮತ್ತೆ ಜಾಮೀನು. ಬಾಂಗ್ಲಾದ ಆರು ಮಂದಿ ನುಸುಳುಕೋರರ ಬಂಧನ, ತನ್ನ 4 ವರ್ಷದ ಪುತ್ರನನ್ನು ಗೋವಾದಲ್ಲಿ ಹತ್ಯೆಗೈದು ಸೂಟ್‌ಕೇಸ್‌ನಲ್ಲಿ ತುಂಬಿ ಕಾರಿನಲ್ಲಿ ಸಾಗಿಸುತ್ತಿದ್ದ ಬೆಂಗಳೂರು ಮೂಲದ ಆರೋಪಿ ಸುಚನಾಸೇಠ್‌ಳನ್ನು ಐಮಂಗಲ ಪೊಲೀಸರು ವಶಕ್ಕೆ ಪಡೆದ ಪ್ರಕರಣ ಜಿಲ್ಲೆಯಲ್ಲಿ ಸದ್ದು ಮಾಡಿದ್ದವು.
ಚಿತ್ರದುರ್ಗದ ಪಾಳು ಬಿದ್ದ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಕುಟುಂಬದ ಐವರ ನಿಗೂಢ ಸಾವು, ಅಸ್ಥಿ ಪಂಜರಗಳ ಪತ್ತೆ ಪ್ರಕರಣ ದ ಮುಂದುವರಿದ ತನಿಖೆ. ವರ್ಷದ ಆರಂಭದಲ್ಲೇ ಅಡಕೆ ವ್ಯಾಪಾರಿಗೆ ಸೇರಿದ ಅಂದಾಜು 1.50 ಕೋಟಿ ರೂ. ದೋಚಿದ್ದ 10 ಆರೋ ಪಿಗಳ ಬಂಧನ, ಕೊಲೆ, ಅಪಘಾತ, ಸೈಬರ್ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಹಲವರು ಜೀವ ಕಳೆದುಕೊಂಡರು.
ಅಂದಿನ ಎಸ್‌ಪಿ ಧರ್ಮೆಂದರ್‌ಕುಮಾರ್‌ಮೀನಾ ನೇತೃತ್ವದಲ್ಲಿ ಚಿತ್ರದುರ್ಗದಲ್ಲಿ ಪ್ರಾಪರ್ಟಿ ಪರೇಡ್ ನಡೆಸಿದ ಪೊಲೀಸರು ಅಂದಾಜು 1.63 ಕೋಟಿ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದರು. ನಗರದ ಹೊರವಲಯದ ಮದಕರಿಪುರ ಹಾಗೂ ಮೊಳಕಾಲ್ಮೂರು ಬಳಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ತಲಾ ಮೂವರು, ಸಾಣೇಕೆರೆ ರಾ.ಹೆ.150ರ ಹೆಗ್ಗೆರೆ ಗೇಟ್ ಬಳಿ ಮೂವರ ಮಕ್ಕಳು ಸೇರಿ ನಾಲ್ವರು ಅಸು ನೀಗಿದರು. ಹಿರಿಯೂರಿನಲ್ಲಿ ಹೊಳಲ್ಕೆರೆ ಯುವಕನ ಮೇಲೆ ಆಸಿಡ್‌ದಾಳಿ ನಡೆಸಿದ ಮೂವರನ್ನು ಬಂಧಿಸಲಾಗಿತ್ತು.
ಮೊಳಕಾಲ್ಮೂರಿನ ಇಂಜಿನಿಯರ್ ಒಬ್ಬರು ಆನ್‌ಲೈನ್‌ನಲ್ಲಿ 8.60 ಲಕ್ಷ ರೂ. ಕಳೆದುಕೊಂಡರು. ಹಣ ದುಪ್ಪಟ್ಟು ಮಾಡಿಕೊಡುವುದಾಗಿ ನಂಬಿಸಿ ನೂರಾರು ಜನರಿಗೆ ವಂಚಿಸಿದ್ದ ಆರೋಪಿಗಳ ಬಂಧನ, ವೈದ್ಯರೊಬ್ಬರಿಗೆ ಸೈಬರ್ ವಂಚಕರಿಂದ ಕೋಟ್ಯಂತರ ರೂ. ವಂಚನೆ, ಚಳ್ಳಕೆರೆ ಮಲ್ಲಸಂದ್ರದ ಬಳಿ ಮಕ್ಕಳಿಬ್ಬರನ್ನು ಬೆಂಕಿಗೆ ತಳ್ಳಿ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆಗಳು ಸಂಚಲನ ಮೂಡಿಸಿದವು.
ಚಿಕ್ಕಮಗಳೂರ ಜಿಲ್ಲೆ ಬಣಕಲ್ ಬಳಿ ಅಪಘಾತದಲ್ಲಿ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಸಮೀಪದ ಚನ್ನಪಟ್ಟಣದ ನಾಲ್ವರು ಸಾವು. ರೇಣುಕ ಸ್ವಾಮಿ ಹತ್ಯೆ ಆರೋಪದಡಿ ಬಂಧಿತರಾಗಿದ್ದ ನಟ ದರ್ಶನ್, ಚಿತ್ರದುರ್ಗದ ರಾಘವೇಂದ್ರ, ಅನು, ಜಗದೀಶ್, ರವಿ ಸೇರಿದಂತೆ ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿತು.
ಮುರುಘಾಮಠದಲ್ಲಿದ್ದ ಬೆಳ್ಳಿಪುತ್ಥಳಿ ಕಳವು, ಅಚ್ಚರಿ ಎಂಬಂತೆ ಮಠಕ್ಕೆ ಸೇರಿದ ಶಾಲಾ ಆವರಣದಲ್ಲಿ ಮರು ದಿನವೇ ಪತ್ತೆ. ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಕಳವು ಕೃತ್ಯ ಎಸಗುತ್ತಿದ್ದ ಅಂತಾರಾಜ್ಯ ಖದೀಮನಿಗೆ ಹಿರಿಯೂರು ಪೊಲೀಸರು ಹೆಡೆಮುರಿ ಕಟ್ಟಿ ಅಂದಾಜು 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡರು. ಆದರೆ, ಬೀಗ ಹಾಕಿದ ಮನೆಗಳಲ್ಲಿ ಸರಣಿ ಕಳ್ಳತನ ಕೃತ್ಯಗಳು ಮುಂದುವರಿದಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
ಅಡಕೆ ಮಾರಾಟದ ವೇಳೆ ಆಗುವ ವಂಚನೆ ವಿರುದ್ಧ ಎಚ್ಚರದಿಂದ ಇರುವಂತೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಅವರಿಂದ ರೈತರಿಗೆ ಮನವಿ. ಬೊಮ್ಮಕ್ಕನಹಳ್ಳಿಯಲ್ಲಿ ಅಳಿಯ ಮತ್ತಿತರರಿಂದ ದಂಪತಿ ಭೀಕರ ಹತ್ಯೆ.
ಚಿತ್ರದುರ್ಗ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಕೆಲಸಕ್ಕೆ ಸೇರಿದ್ದ ಆರು ಬಾಂಗ್ಲಾ ನುಸುಳುಕೋರರ ಜಾಲವನ್ನು ಪೊಲೀಸರು ಭೇದಿಸಿದ್ದು, ತನಿಖೆ ಮುಂದುವರಿದಿದೆ. 19ರ ವಯಸ್ಸಿನ ಹುಡುಗಿಯನ್ನು ವರಿಸಿದ್ದ 46 ವರ್ಷ ವ್ಯಕ್ತಿಯನ್ನು ಹತ್ಯೆ ಮಾಡಿದ ಪ್ರಕರಣ ಭರಮಸಾಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಗಳ ಬಂಧನವಾಗಿದೆ.
ಹೊಸ ಎಸ್‌ಪಿ: ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ಕೇಂದ್ರ ಸೇವೆಗೆ ತೆರಳಿದ್ದು, ಅವರ ಜಾಗಕ್ಕೆ ವರ್ಗಾವಾಗಿ ಬಂದ ರಂಜಿತ್ ಕುಮಾರ್ ಬಂಡಾರು ಅಧಿಕಾರ ಸ್ವೀಕರಿಸಿದ್ದು ಇದೇ ವರ್ಷ.
----