

ಚಿತ್ರದುರ್ಗ: ಬೆಂಗಳೂರಿನಲ್ಲಿ ಭೀಕರವಾಗಿ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಡಿ ನಟ ದರ್ಶನ್ ಕೂಡ ಆರೋಪಿತನಾಗಿದ್ದು, ಯಾರೇ ತಪ್ಪಿತಸ್ಥರಾದರೂ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿ ವಿವಿಧ ಪಕ್ಷ, ಸಂಘ-ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು ಪಕ್ಷಾತೀತವಾಗಿ ಬುಧವಾರ ಪ್ರತಿಭಟನೆ ನಡೆಸಿದರು.
ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ವೀರವನಿತೆ ಒನಕೆ ಓಬವ್ವ ವೃತ್ತದವರೆಗೂ ಮೆರವಣಿಗೆ ನಡೆಸಿದರು. ನಟ ದರ್ಶನ್ ಭಾವಚಿತ್ರ ಸುಟ್ಟು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ರೇಣುಕಾಸ್ವಾಮಿ ಮೇಲೆ ತೀವ್ರ ಸ್ವರೂಪದ ಮಾರಣಾಂತಿಕ ಹಲ್ಲೆ ನಡೆಸಿ, ಹತ್ಯೆಗೈದಿರುವುದನ್ನು ನೋಡಿದರೆ, ಮಾನವೀಯತೆ ಮರೆತು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಆತನ ಪತ್ನಿ ಈಗ 3 ತಿಂಗಳ ಗರ್ಭಿಣಿ. ಒಬ್ಬನೇ ಪುತ್ರನನ್ನು ಕಳೆದುಕೊಂಡ ಪಾಲಕರ ಸ್ಥಿತಿ ಹೇಳತೀರದಾಗಿದೆ. ಇಡೀ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಹೋದ ಪ್ರಾಣ ಮರಳಿ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಬಂಧಿಸಿದ್ದಾರೆ. ಆದರೆ, ರಾಜಕೀಯ ಪ್ರಭಾವ ಬೀರಿ ಪೊಲೀಸರ ತನಿಖೆಗೆ ಅಡ್ಡಪಡಿಸುವ ಹುನ್ನಾರ ನಡೆಯುವ ಸಾಧ್ಯತೆಯೂ ಇದೆ. ಅದಕ್ಕೆ ಸಿಎಂ, ಗೃಹ ಸಚಿವರು ಅವಕಾಶ ಮಾಡಿಕೊಡಬಾರದು ಎಂದು ಕೋರಿದರು.
ಶ್ರೀ ಬಸವನಾಗಿದೇವ ಸ್ವಾಮೀಜಿ, ಎಂಎಲ್ಸಿ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ನಗರಸಭೆ ಸದಸ್ಯ ಸೊಪ್ಪು ಸುರೇಶ್, ಮಾಜಿ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್, ಮುಖಂಡರಾದ ಷಡಾಕ್ಷರಯ್ಯ, ಕೆ.ಎಂ.ವೀರೇಶ್, ಮರುಳಾರಾಧ್ಯ, ಕೆಇಬಿ ಷಣ್ಮುಖಪ್ಪ, ಉಮೇಶ್ ಇತರರಿದ್ದರು.