

ಪಾಂಡವಪುರ: ತಾಲೂಕಿನ ಕ್ಯಾತನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ರೈತಸಂಘ, ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಪಾದಯಾತ್ರೆ ಮೂಲಕ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.
ಗ್ರಾಪಂ ವ್ಯಾಪ್ತಿಯ ಎಣ್ಣೆಹೊಳೆಕೊಪ್ಪಲು, ಚೆಲುವರಸನಕೊಪ್ಪಲು ಹಾಗೂ ಬ್ಯಾಟೆ ತಿಮ್ಮನಕೊಪ್ಪಲು ಗ್ರಾಮಗಳಲ್ಲಿ ಮಂಗಳವಾರ ರಾತ್ರಿ ಪಾದಯಾತ್ರೆ ನಡೆಸಿ ಮತಯಾಚಿಸಿದ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಗ್ರಾಮದ ಮಹಿಳೆಯರು ಮನೆಗಳ ಮುಂದೆ ಆರತಿ ಬೆಳಗಿ ಸ್ವಾಗತ ಕೋರಿದರು. ಅಭಿಮಾನಿಗಳು ಮತ್ತು ರೈತಸಂಘದ ಕಾರ್ಯಕರ್ತರು 3 ಗ್ರಾಮಗಳಲ್ಲೂ ಕ್ರೇನ್ ಮೂಲಕ ಬೃಹತ್ ಹಾರಗಳನ್ನು ಹಾಕಿ ಜೈಕಾರ ಕೂಗಿದರು.
ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅನುಕಂಪದ ನಡುವೆಯೂ ಸೋಲು ಕಂಡಿದ್ದೇನೆ. ಈ ಚುನಾವಣೆಯಲ್ಲಿ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪಾದಯಾತ್ರೆ ಮೂಲಕ ಇಡೀ ಕ್ಷೇತ್ರದ ಸುತ್ತಾಡಿ ಜನರ ಕಷ್ಟ-ಸುಖ ಅರಿಯುವ ಕೆಲಸ ಮಾಡಿದ್ದೇನೆ. ಪಾದಯಾತ್ರೆ ವೇಳೆ ಕ್ಷೇತ್ರದ ಜನರು ಅನುಭವಿಸುತ್ತಿರುವ ಯಾತನೆಗಳು ಮತ್ತು ಗ್ರಾಮಗಳಲ್ಲಿರುವ ಮೂಲಸೌಕರ್ಯದ ಕೊರತೆಯ ವಿಚಾರಗಳು ಅರಿವಿಗೆ ಬಂದಿದೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸ ಬೇಕಾಗಿದೆ. ಶಿಕ್ಷಣದಲ್ಲಿ ಕ್ರಾಂತಿ ತಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಮಹಿಳಾ ಸಬಲೀಕರಣಕ್ಕೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಬೇಕು. ಯುವಕರನ್ನು ಕಾಡುತ್ತಿರುವ ನಿರಿದ್ಯೋಗ ಸಮಸ್ಯೆಗೆ ಪರರಿಹಾರ ಕಂಡಹಿಡಿಯಲು ಪ್ರಯತ್ನಿಸಲಾಗುವುದು ಎಂದರು.
ಇದೇ ವೇಳೆ ಸಿಆರ್‌ಪಿಎಫ್‌ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಎಣ್ಣೆಹೊಳೆಕೊಪ್ಪಲು ಗ್ರಾಮದ ಸಿ.ರಾಜು ಅವರನ್ನು ಸನ್ಮಾನಿಸಲಾಯಿತು. ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಘು, ಯೋಗೇಶ್, ಮೋಹನ್, ಶಾಂತರಾಜು, ಧನಂಜಯ, ಸಂತೋಷ್, ಶ್ರೀನಿವಾಸ್, ನಾರಾಯಣ್, ರೋಹಿತ್, ಪ್ರಕಾಶ್, ನಿರಂಜನ್, ಗೋವಿಂದಣ್ಣ, ಪುಟ್ಟೇಗೌಡ, ರಮೇಶ್ ಇತರರು ಇದ್ದರು.