

ಚಿತ್ರದುರ್ಗ: ಕೊಲೆಯಾದ ರೇಣುಕಸ್ವಾಮಿ ಕುಟುಂಬ ತುಂಬಾ ನೊಂದಿದೆ. ವಯಸ್ಸಾದ ಪಾಲಕರು-ಅಜ್ಜಿ ಹಿರಿಯರಿದ್ದು, ಅವರನ್ನು ನೋಡಿಕೊಳ್ಳುವವರು ಯಾರು ಎಂದು ನಟ ವಿನೋದ್ ರಾಜ್ ದುಃಖಿತರಾದರು.
ರೇಣುಕಸ್ವಾಮಿ ಮನೆಗೆ ಶುಕ್ರವಾರ ಭೇಟಿ ನೀಡಿ ಕುಟುಂಬಸ್ಥರಿಗೆ 1 ಲಕ್ಷ ರೂ. ಸಹಾಯಧನದ ನೆರವು ನೀಡಿದ ನಂತರ ಮಾತನಾಡಿದರು. ಈ ಪ್ರಕರಣ ಸಂಬಂಧ ದರ್ಶನ್ ಪರ ಸಂಧಾನಕ್ಕೆ ಮುಂದಾಗಿಲ್ಲ ಎಂದು ಹೇಳಿದರು.
ರೇಣುಕಸ್ವಾಮಿ ಕುಟುಂಬಕ್ಕೆ ಆಧಾರವಾಗಿದ್ದ. ಆದರೆ, ಆತನನ್ನು ಕಳೆದುಕೊಂಡ ದುಃಖದಿಂದ ಈಗಲೂ ಹೊರಬರಲು ಪಾಲಕರು, ಪತ್ನಿ, ಅಜ್ಜಿಗೆ ಸಾಧ್ಯವಾಗಿಲ್ಲ. ಇದನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವಾಗುತ್ತಿದೆ ಎಂದರು.
ಕಲಾವಿದರು ಜನಸಾಮಾನ್ಯರಂತೆ. ಆದರೆ, ನಮ್ಮನ್ನು ದೊಡ್ಡದಾಗಿ ಬಿಂಬಿಸಿ ಸಮಾಜ ಗೌರವಿಸುತ್ತದೆ. ಹೀಗಿರುವಾಗ ಮಾದರಿಯಾಗಿ, ಬಹಳ ಎಚ್ಚರಿಕೆಯಿಂದ ಬಾಳಬೇಕು. ಮಾಧ್ಯಮದವರು ಮಿತ್ರರೇ ಹೊರತು ಶತ್ರುಗಳಲ್ಲ. ತಪ್ಪು ನಡೆದಾಗ ತಿದ್ದಿ ಬುದ್ಧಿ ಹೇಳುವ ಪ್ರಭಾವಿ ಕ್ಷೇತ್ರವಾಗಿದ್ದು, ಒಳ್ಳೆಯದ್ದನ್ನು ಸ್ವಾಗತಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಸಂಧಾನಕ್ಕೆ ಮುಂದಾಗಿಲ್ಲ: ನನ್ನ ಮಗನ ಸಾವಿಗೆ ನ್ಯಾಯ ಸಿಗಬೇಕೆಂದು ಪಾಲಕರು ಕಣ್ಣೀರು ಸುರಿಸಿದರು. ಪ್ರಾಣ ತೆಗೆಯಲು ಯಾರಿಗೂ ಹಕ್ಕಿಲ್ಲ. ಮಾನವೀಯತೆ ಮುಖ್ಯವಾಗಬೇಕು. ಈ ಪ್ರಕರಣ ಸಂಬಂಧ ಸಂಧಾನಕ್ಕೆ ಮುಂದಾಗಿಲ್ಲ ಎಂದು ವಿನೋದ್ ರಾಜ್ ಸ್ಪಷ್ಟಪಡಿಸಿದರು.
ಮಗ ಸಾವಿಗೂ ಮುನ್ನ ನರಳಿದ ರೀತಿ ಕೇಳಿ ಕುಟುಂಬಸ್ಥರ ಕರುಳು ಕಿತ್ತು ಬರುತ್ತಿದೆ. ನಾವೆಲ್ಲರೂ ತುಂಬಾ ನೊಂದಿದ್ದೇವೆ. ನನ್ನ ಮನೆತನ ನಾಶವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಸೊಸೆಗೆ ಸರ್ಕಾರಿ ಕೆಲಸ ನೀಡುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿ ಮಾಡಿದ್ದೇವೆ ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ಅಳಲು ತೋಡಿಕೊಂಡರು.