ದರ ನಿಗದಿ ಸಮಿತಿ ವರದಿ ಬಹಿರಂಗ ಕುರಿತು ನಿಲುವು ತಿಳಿಸಿ :  ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಹೈಕೋರ್ಟ್ ಸೂಚನೆ

highcourt
Published on

ಬೆಂಗಳೂರು:  ಮೆಟ್ರೋ ರೈಲಿನ ಟಿಕೆಟ್ ದರ ಹೆಚ್ಚಳ ಸಂಬಂಧ ನಿವತ್ತ ನ್ಯಾಯಮೂರ್ತಿ ತರಿಣಿ ನೇತತ್ವದ ದರ ನಿಗದಿ ಸಮಿತಿ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸುವ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್) ಹೊಂದಿರುವ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿ ತರಿಣಿ ನೇತತ್ವದ ದರ ನಿಗದಿ ಸಮಿತಿ ಸಲ್ಲಿಸಿರುವ ವರದಿ ಬಹಿರಗಂಪಡಿಸಲು ಆದೇಶಿಸುವಂತೆ ಕೋರಿ ಸಂಸದ ತೇಜಸ್ವಿ ಸೂರ್ಯ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್ ಪ್ರಸಾದ್ ಅವರ ಪೀಠ ಈ ಸೂಚನೆ ನೀಡಿದೆ.

ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿಗೆ ಬಿಎಂಆರ್‌ಸಿಎಲ್ ಆಕ್ಷೇಪಣೆ ಸಲ್ಲಿಸಿದೆ. ದರ ನಿಗದಿ ಸಮಿತಿ ವರದಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲು ಜುಲೈನಲ್ಲಿ ರಾಜ್ಯ ಸರ್ಕಾರವು ತನಗೆ ಅನುಮತಿ ನೀಡಿದೆ ಎಂಬುದಾಗಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇನ್ನೂ ವೆಬ್ ಸೈಟ್ ನಲ್ಲಿ ವರದಿ ಪ್ರಕಟಿಸಿಲ್ಲ ಎಂದು ನ್ಯಾಯಪೀಠದ ಗಮನಕ್ಕೆ ತಂದರು.'

ಬಿಎಂಆರ್‌ಸಿಎಲ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದೆ. ದರ ಏರಿಕೆ ಸಂಬಂಧಿಸಿದಂತೆ ನ್ಯಾ.ತರಿಣಿ ನೇತತ್ವದ ದರ ನಿಗದಿ ಸಮಿತಿಯ ವರದಿ ಬಹಿರಂಗ ಪಡಿಸುವುದು ಅದರ ಕರ್ತ್ಯವ್ಯವಾಗಿದೆ. ದೆಹಲಿ, ಮುಂಬೈ ಮತ್ತು ಹೈದ್ರಬಾದ್ ಮೆಟ್ರೋ ನಿಗಮಗಳು ಪ್ರಯಾಣ ದರ ಏರಿಕೆಗೆ ಸಂಬಂಧಿಸಿದಂತೆ ವರದಿ ಬಹಿರಂಗಪಡಿಸಿವೆ. ಆದರೆ ಏಪ್ರಿಲ್ ತಿಂಗಳಿನಿಂದ ಮೂರು ಬಾರಿ ಮನವಿ ವಾಡಿದರೂ ಬಿಎಂಆರ್‌ಸಿಎಲ್ ವರದಿ ಬಹಿರಂಗ ಪಡಿಸಿಲ್ಲ. ಆದ್ದರಿಂದ ವರದಿ ಬಹಿರಂಗ ಪಡಿಸಲು ಬಿಎಂಆರ್‌ಸಿಎಲ್‌ಗೆ ಸೂಚಿಸುವಂತೆ ಅರ್ಜಿದಾರರು ಕೋರಿದ್ದರು.

ಈ ವಾದ ಆಲಿಸಿದ ನ್ಯಾಯಪೀಠ, ನ್ಯಾ.ತರಿಣಿ ನೇತತ್ವದ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗಪಡಿಸುವ ಕುರಿತು ತನ್ನ ನಿಲುವು ತಿಳಿಸುವಂತೆ ಬಿಎಂಆರ್‌ಸಿಎಲ್ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಸೆ.12ಕ್ಕೆ ಮುಂದೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net