ದಯಾನಂದ್ ಅಮಾನತು ವಾಪಸ್‌ಗೆ ಒತ್ತಾಯ

Dayanand B
Published on

ಕಾಲ್ತುಳಿತ ಘಟನೆ ಹಿನ್ನೆಲೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಬಿ.ದಯಾನಂದ್ ಅವರನ್ನು ಅಮಾನತುಗೊಳಿಸಿರುವುದು ಸರಿಯಲ್ಲ. ಕೂಡಲೇ ಸರ್ಕಾರ ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಎಲ್ಲ ಸಂಘಟನೆಗಳೊಂದಿಗೆ ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಎಚ್ಚರಿಸಿದೆ.

ದಯಾನಂದ್ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿರುವುದಲ್ಲದೆ ಪೊಲೀಸ್ ಇಲಾಖೆಯಲ್ಲಿ ಸುದೀರ್ಘವಾಗಿ ಸಮರ್ಪಕ, ದಕ್ಷತೆ ಪ್ರಾಮಾಣಿಕತೆಯಿಂದ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವ ವೇಳೆ ಆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ಇವರ ಅಮಾನತು ಸರಿಯಲ್ಲ ಎಂದು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ದ್ಯಾವಪ್ಪ ನಾಯಕ ಹೇಳಿದರು.

ಪೊಲೀಸ್ ಇಲಾಖೆಯ ನಿರ್ದೇಶನ ಪಾಲಿಸದೆ, ಪೊಲೀಸ್ ಇಲಾಖೆಯ ಪೂರ್ವಾನುಮತಿ ಇಲ್ಲದೇ ವಿಜಯೋತ್ಸವ ಆಚರಿಸಲಾಯಿತು. ಹೀಗಾಗಿ, ಇದರಲ್ಲಿ ಆಯೋಜಕರ ತಪ್ಪಿದೆ. ಹೀಗಿದ್ದರೂ ದಯಾನಂದ್ ಅವರನ್ನು ಅಮಾನತುಗೊಳಿಸಿರುವುದು ಖಂಡನೀಯವಾಗಿದೆ. ಆದ್ದರಿಂದ ಸರ್ಕಾರ ಈ ವಿಚಾರವನ್ನು ಸೂಕ್ಷ್ಮವಾಗಿ ಹಾಗೂ ಗಂಭೀರವಾಗಿ ಪರಿಗಣಿಸಿ 7 ದಿನಗಳೊಳಗೆ ಅಮಾನತು ರದ್ದುಪಡಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದೆಂದರು. ಪದಾಧಿಕಾರಿಗಳಾದ ಸಿ.ಜಯಕುಮಾರ್, ಪ್ರಭಾಕರ್ ಹುಣಸೂರು, ಮಣಿನಾಯಕ, ತಾಯೂರು ಪ್ರಕಾಶ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net