

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 83ನೇ ವರ್ಧಂತಿ ಅಂಗವಾಗಿ ದತ್ತಸೇನೆ ವತಿಯಿಂದ ಭಾನುವಾರ ಶೋಭಾಯಾತ್ರೆ ನಡೆಯಿತು.
ಚಾಮುಂಡಿಪುರಂ ವೃತ್ತದಿಂದ ಆರಂಭಗೊಂಡ ಯಾತ್ರೆಯು ಝಾನ್ಸಿರಾಣಿ ಲಕ್ಷ್ಮೀಬಾಯಿ ರಸ್ತೆ ಮಾರ್ಗವಾಗಿ ಗಣಪತಿ ಸಚ್ಚಿದಾನಂದ ಆಶ್ರಮ ತಲುಪಿತು. ಶೋಭಾಯಾತ್ರೆಯಲ್ಲಿ ನಾದಸ್ವರ ಮಂಗಳವಾದ್ಯ, ವೇದ ಬಳಗ, ನಂದಿಧ್ವಜ, ಚಂಡೆ ವಾದ್ಯ, ವೀರಗಾಸೆ, ಮಹಿಳಾ ಭಜನಾ ಮಂಡಳಿ ಭಾಗಿಯಾಗಿತ್ತು. ಸಾರೋಟದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ವೆಂಕಟೇಶ್ವರ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಶಾಸಕ ಟಿ.ಎಸ್.ಶ್ರೀವತ್ಸ ನಂದಿಕಂಬಕ್ಕೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎನ್.ಎಂ.ನವೀನ್ ಕುಮಾರ್, ದತ್ತಸೇನೆಯ ಅಧ್ಯಕ್ಷ ಆರ್.ಎಸ್. ಸತ್ಯನಾರಾಯಣ, ಬ್ರಾಹ್ಮಣ ಮಹಾಸಭಾ ಮೈಸೂರು ಪ್ರತಿನಿಧಿ ಲಕ್ಷ್ಮೀದೇವಿ, ನಗರಪಾಲಿಕೆ ಮಾಜಿ ಸದಸ್ಯರಾದ ಮ.ವಿ.ರಾಮಪ್ರಸಾದ್, ಪಾರ್ಥಸಾರಥಿ, ಸೌಭಾಗ್ಯಮೂರ್ತಿ, ಕೇಬಲ್ ಮಹೇಶ್ ಇತರರಿದ್ದರು.