

ಚಿಕ್ಕಬಳ್ಳಾಪುರ : ಜೈವಿಕ ತ್ಯಾಜ್ಯವನ್ನು ಸಮರ್ಪಕ ವಿಲೇವಾರಿ ಮಾಡದ ಆಸ್ಪತ್ರೆಗಳ ಪರವಾನಗಿ ರದ್ದು ಮಾಡಲು ಜಿಲ್ಲಾಧಿಕಾರಿ ಆರ್.ಲತಾ ಜಿಲ್ಲಾ ಪರಿಸರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ಜೈವಿಕ ತ್ಯಾಜ್ಯ ನಿರ್ವಹಣೆಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಯ ಬಳಿಕ ಸೃಜನೆಯಾಗುವ ತ್ಯಾಜ್ಯವನ್ನು ಸುರಕ್ಷತಾ ಮಾರ್ಗದಲ್ಲಿ ಸಂಗ್ರಹಿಸಿ, ವೈಜ್ಞಾನಿಕ ವಿಧಾನದಲ್ಲಿ ವಿಂಗಡಿಸಬೇಕು. ಬಳಿಕ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಇದಕ್ಕಾಗಿ ಜಿಲ್ಲೆಯಲ್ಲಿ ಮೀರಾ ಎನ್ವಿರೋಟೆಕ್ ಮತ್ತು ಪ್ರಜ್ವಲ್ ಮ್ಯಾನೇಜ್ಮೆಂಟ್ ಸಲ್ಯೂಷನ್ಸ್ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.
ಪ್ರತಿಯೊಂದು ಆಸ್ಪತ್ರೆಯು ಅಗತ್ಯ ದಾಖಲಾತಿಗಳನ್ನು ಪರಿಸರ ಇಲಾಖೆಗೆ ಸಲ್ಲಿಸಿ, ತ್ಯಾಜ್ಯ ವಿಲೇವಾರಿ ನವೀಕರಣವನ್ನು ಪಡೆಯಬೇಕು. ಒಂದು ವೇಳೆ ನಿಯಮಗಳನ್ನು ಪಾಲಿಸದಿದ್ದಲ್ಲಿ, ನವೀಕರಣ ಮಾಡಿಕೊಂಡಿಲ್ಲದಿದ್ದಲ್ಲಿ ನಿರ್ದಾಕ್ಷಿಖ್ಯ ಕ್ರಮ ಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಕೊಟ್ಟ ನೋಟಿಸ್‌ಗಳಿಗೆ ಪ್ರತಿಕ್ರಿಯಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಆಸ್ಪತ್ರೆಗಳ ಪರವಾನಗಿಯನ್ನು ರದ್ದುಗೊಳಿಸಬೇಕು ಎಂದರು.
ಜಿಲ್ಲೆಯಲ್ಲಿ ಕರೊನಾ ಸಾಂಕ್ರಾಮಿಕ ರೋಗವು ಸಂಪೂರ್ಣವಾಗಿ ಹತೋಟಿಯಲ್ಲಿದೆ. ಇದನ್ನು ಹೀಗೆಯೇ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.
ಆಸ್ಪತ್ರೆಗಳಲ್ಲಿನ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಜನರ ಪ್ರಾಣ ಸಂಕಟಕ್ಕೂ ಕಾರಣವಾಗುತ್ತದೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಸಭೆಯಲ್ಲಿ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಜಿಲ್ಲಾ ಪರಿಸರ ಅಧಿಕಾರಿ ವಿಜಯಲಕ್ಷ್ಮೀ ಮತ್ತಿತರರು ಇದ್ದರು.
2.14 ಲಕ್ಷ ಕೆ.ಜಿ.ತ್ಯಾಜ್ಯ ಸಂಗ್ರಹ : ಸರ್ಕಾರಿ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಜಿಲ್ಲೆಯಲ್ಲಿ ಕರೊನಾ ಮೊದಲನೇ ಅಲೆಯಲ್ಲಿ 8 ಕ್ವಾರಂಟೈನ್ ಮತ್ತು ಹೆಲ್ತ್ ಕೇರ್ ಸೆಂಟರ್, 31 ಕರೊನಾ ಕೇರ್ ಸೆಂಟರ್ ಗಳಲ್ಲಿ 5582 ಬೆಡ್ ಮತ್ತು ಅದೇ ರೀತಿ ಎರಡನೇ ಅಲೆಯಲ್ಲಿ 6 ಕ್ವಾರಂಟೈನ್ ಮತ್ತು ಹೆಲ್ತ್ ಕೇರ್ ಸೆಂಟರ್, 13 ಕರೊನಾ ಕೇರ್ ಸೆಂಟರ್ ಗಳಲ್ಲಿ 9596 ಬೆಡ್ ಗಳ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿಯವರೆಗೂ ಜಿಲ್ಲಾದ್ಯಂತ 43,220 ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಸಂದರ್ಭದಲ್ಲಿ 48,867 ಕೆ.ಜಿ.ಯಷ್ಟು ಕರೊನಾ ಬಯೋ ಮೆಡಿಕಲ್ ತ್ಯಾಜ್ಯ ಮತ್ತು 1,71,271 ಕೆ.ಜಿ. ಕರೊನೇತರ ಬಯೋ ಮೆಡಿಕಲ್ ತ್ಯಾಜ್ಯ ಸೇರಿ 2,14,491 ಕೆ.ಜಿ.ಯಷ್ಟು ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಇಂದಿರಾ ಆರ್.ಕಬಾಡೆ ಸಭೆಗೆ ಮಾಹಿತಿ ನೀಡಿದರು.