

ಚಿಕ್ಕಬಳ್ಳಾಪುರ : ತ್ಯಾಜ್ಯ ನಿರ್ವಹಣೆಯಲ್ಲಿ ಚಿಕ್ಕಬಳ್ಳಾಪುರವನ್ನು ಮಾದರಿ ಜಿಲ್ಲೆಯನ್ನಾಗಿಸಲು ಶ್ರಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಲತಾ ಹೇಳಿದರು.
ತಾಲೂಕಿನ ಪುಟ್ಟ ತಿಮ್ಮನಹಳ್ಳಿಯಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಗಳವಾರ ಭೇಟಿ ನೀಡಿ, ತ್ಯಾಜ್ಯ ನಿರ್ವಹಣೆ, ಎರೆಹುಳು ಗೊಬ್ಬರ ಘಟಕ, ನಾಟಿ ಹಸು, ಸಾವಯವ ಗೊಬ್ಬರದಿಂದ ಬೆಳೆದ ಸೊಪ್ಪು, ಮಿಶ್ರ ಬೆಳೆ, ರಾಗಿಯನ್ನು ಪರಿವೀಕ್ಷಣೆ ಮಾಡಿ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಪರಿಣಾಮಕಾರಿಯಾಗಿ ವಿಲೇವಾರಿ ಮಾಡುವ ಹೊಣೆಯನ್ನು ಆಯಾ ಸ್ಥಳೀಯ ಆಡಳಿತ ಸಂಸ್ಥೆಗಳು ಸಮರ್ಪಕವಾಗಿ ನಿರ್ವಹಿಸಬೇಕು. ಇದರ ವಿಚಾರವಾಗಿ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ನಗರಸಭೆಯ ಕಾರ್ಯ ವೈಖರಿಯ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರು ಮನೆಯಲ್ಲೇ ತ್ಯಾಜ್ಯ ವಿಂಗಡಿಸಿ ಕಸದ ಗಾಡಿಗೆ ನೀಡುತ್ತಿದ್ದಾರೆ. ಇದರಿಂದ ತ್ಯಾಜ್ಯ ಮರುಬಳಕೆಗೆ ಸಹಕಾರಿಯಾಗಿದೆ. ಈಗಾಗಲೇ ಘನ ತ್ಯಾಜ್ಯ ನಿರ್ವಹಣೆ ಘಟಕಕ್ಕೆ ಜಿಲ್ಲೆಯಲ್ಲಿ 15 ಎಕರೆ ಜಾಗ ಮೀಸಲಿರಿಸಲಾಗಿದೆ ಎಂದರು.
ಉತ್ತಮ ರೀತಿಯಲ್ಲಿ ಕಸ ವಿಂಗಡಣೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಈಗಾಗಲೇ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ, ಹಸಿ ಕಸದಿಂದ ಗೊಬ್ಬರ ತಯಾರಿಸಲಾಗುತ್ತಿದೆ. ಸಾವಯವ ಗೊಬ್ಬರದ ಮೂಲಕ ಮಿಶ್ರ ಬೆಳೆ ಬೆಳೆಯಲು ಕ್ರಮ ಕೈಗೊಳ್ಳಲಾಗಿದೆ. ತ್ಯಾಜ್ಯವು ಆರ್ಥಿಕ ಲಾಭ ತಂದುಕೊಡುತ್ತದೆ. ಆದರೆ, ಸದ್ಬಳಕೆ ಮುಖ್ಯ. ತ್ಯಾಜ್ಯ ವಿಂಗಡಣೆ ಮತ್ತು ಸಮರ್ಪಕ ಬಳಕೆಯಲ್ಲಿ ಚಿಕ್ಕಬಳ್ಳಾಪುರ ಮಾದರಿ ಜಿಲ್ಲೆಯನ್ನಾಗಿಸುವ ಗುರಿ ಸಾಧನೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ತಿಳಿಸಿದರು.
ಪುಟ್ಟತಿಮ್ಮನಹಳ್ಳಿ ಘಟಕದಲ್ಲಿ 15 ವರ್ಷಗಳಿಂದ ಕಸ ಸಂಗ್ರಹಿಸಲಾಗುತ್ತಿದೆ. ಆದರೆ, ಹಸಿ ಕಸ ಮತ್ತು ಒಣ ಕಸವನ್ನಾಗಿ ವಿಂಗಡಿಸಿಲ್ಲ. ಆದರೆ ಕಸ ಕತ್ತರಿಸುವ ಮತ್ತು ಜರಡಿ ಹಿಡಿಯುವ ಯಂತ್ರಗಳ ಮೂಲಕ ಪ್ಲಾಸ್ಟಿಕ್ ಮತ್ತು ಗೊಬ್ಬರ ಕಸವನ್ನು ವಿಂಗಡಣೆ ಮಾಡಲಾಗುತ್ತದೆ. ಈ ಮೂಲಕ ಯಾವುದೇ ಕಸವನ್ನು ವ್ಯರ್ಥವಾಗದಂತೆ ಮರು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮಾತನಾಡಿ, ನಗರದ ಹಸಿ ಕಸವನ್ನು ಎರೆಹುಳುವಿನಿಂದ ಗೊಬ್ಬರವನ್ನಾಗಿ ತಯಾರಿಸಿ ಮಿಶ್ರ ಬೆಳೆ ಬೆಳೆಯಲು ಜಿಲ್ಲಾಡಳಿತ ಮತ್ತು ನಗರಸಭೆಯಿಂದ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ರಾಗಿ, ತರಕಾರಿ ಸೇರಿ ಕೃಷಿ ಉತ್ಪನ್ನ ಮತ್ತು ರೈತರಿಗೆ ಇಲ್ಲಿ ತಯಾರಿಸಲ್ಪಟ್ಟಂತಹ ಎರೆಹುಳು ಗೊಬ್ಬರವನ್ನು ಕಡಿಮೆ ದರದಲ್ಲಿ ಮಾರಾಟ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪೌರಾಯುಕ್ತ ಲೋಹಿತ್ ಮತ್ತಿತರರು ಇದ್ದರು.