ತೋಟದಲ್ಲಿ ಚಿರತೆ ಪ್ರತ್ಯಕ್ಷ

unnamed
Published on

ತಲಕಾಡು: ತಲಕಾಡು ಸುತ್ತ ಆರು ತಿಂಗಳಿನಿಂದ ತಲ್ಲಣ ಮೂಡಿಸಿರುವ ಚಿರತೆ ಸೋಮವಾರ ಬೆಳಗ್ಗೆ ಬಸವನಗುಡ್ಡದ ಬಳಿಯ ತೋಟದಲ್ಲಿ ಕಾಣಿಸಿಕೊಂಡಿದೆ.
ನಿವೃತ್ತ ರಾಜಸ್ವನಿರೀಕ್ಷಕ ರಾಜು ಅವರ ಮೆಣಸಿನಕಾಯಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅವರ ಸಹೋದರ ಶಂಕರ ಅವರಿಗೆ ಬೆಳಗ್ಗೆ 8.50ರಲ್ಲಿ ಚಿರತೆ ಕಾಣಿಸಿಕೊಂಡಿದೆ. ನಂತರ ಈ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ತಲಕಾಡು ಉಪವಲಯ ಅರಣ್ಯಾಧಿಕಾರಿ ಉಮೇಶ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆ ಹೆಜ್ಜೆಯನ್ನು ಪತ್ತೆ ಮಾಡಿ, ಜಿಲ್ಲಾ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಚಿರತೆ ಸೆರೆಗೆ ಬೋನ್ ಇಡಲಾಗಿದ್ದು ಚಿರತೆ ಬೋನಿಗೆ ಬೀಳದೆ ಸತಾಯಿಸುತ್ತಿದೆ. ಅರಿವಳಿಕೆ ಮದ್ದಿನ ಮೂಲಕ ಸೆರೆ ಹಿಡಿಯಲು, ಮೈಸೂರಿನ ಶಾರ್ಪ್ ಶೂಟರ್ ಅಕ್ರಂ ಅವರ ನೆರವು ಪಡೆದುಕೊಳ್ಳಲು ಇಲ್ಲಿನ ಅರಣ್ಯ ಅಧಿಕಾರಿ ಉಮೇಶ್ ನಿರ್ಧರಿಸಿದ್ದಾರೆ.

ಎಚ್.ಡಿ.ಕೋಟೆ: ಪಟ್ಟಣದ ಬೆಳಗನಹಳ್ಳಿ ರಸ್ತೆಯ ಸುಬ್ರಹ್ಮಣ್ಯ ಎಂಬುವರ ತೋಟದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸೆರೆಗೆ ಬೋನು ಇಡಲಾಗಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಧು ತಿಳಿಸಿದ್ದಾರೆ.
ಕಬ್ಬಿನಗದ್ದೆ ಮತ್ತು ತಾರಕ ನದಿಯ ಸಮೀಪದಲ್ಲಿ ಚಿರತೆ ಉಪಟಳ ಹೆಚ್ಚಾಗಿದೆ. ಜಮೀನುಗಳಲ್ಲಿರುವ ಮೇಕೆ, ಕುರಿ ಮತ್ತು ನಾಯಿಗಳನ್ನು ಚಿರತೆ ಬಲಿ ಪಡೆಯುತ್ತಿದೆ ಎಂದು ರೈತರು ತಿಳಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸಿಬ್ಬಂದಿ ಕಳುಹಿಸಿ ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಚಿರತೆಯ ಸೆರೆಗಾಗಿ ಇರಿಸಿರುವ ಬೋನಿಗೆ ಮೇಕೆಯನ್ನು ಕಟ್ಟಲಾಗಿದೆ ಎಂದರು.
ಚಿರತೆ ಒಂದು ವಾರದಿಂದ ಹಗಲು ಮತ್ತು ರಾತ್ರಿಯ ವೇಳೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು ಅಕ್ಕಪಕ್ಕದ ಜಮೀನಿನ ರೈತರಲ್ಲಿ ಆತಂಕ ಉಂಟು ಮಾಡಿದೆ. ರೈತರು ಚಿರತೆಯ ಭಯಕ್ಕೆ ತಮ್ಮ ಜಮೀನುಗಳಲ್ಲಿ ಧೈರ್ಯವಾಗಿ ಕೆಲಸ ಮಾಡಲು ಆಗುತ್ತಿಲ್ಲ. ಜಮೀನಿನ ಮಧ್ಯಭಾಗದಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡು ಬಂದಿರುವುದರಿಂದ ಜನರು ಭಯಭೀತರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net