ತುಂಗಾ ನದಿಯಲ್ಲಿ ಮರಳು ಮಾಫಿಯಾ

09koppa02 sand
ಭಂಡಿಗಡಿ ಗ್ರಾಮದ ಹೊಳೆಹೊದ್ದು ಸಮೀಪದ ದೋಣಿಗಂಡಿಯಲ್ಲಿ ತುಂಗಾ ನದಿಯಿಂದ ಮರಳು ದೋಚಿರುವುದು.
Published on

ಕೊಪ್ಪ: ಮಳೆಗಾಲ ಮುಗಿಯುತ್ತಿದ್ದಂತೆ ಮರಳು ದಂಧೆಕೋರರ ಹಾವಳಿ ಹೆಚ್ಚಾಗಿದ್ದು ತುಂಗಾ ನದಿಗೆ ಮಧ್ಯರಾತ್ರಿ ಇಳಿದು ಮರಳು ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ.

ಹರಿಹರಪುರ ಹೋಬಳಿಯಲ್ಲಿ ತುಂಗಾ ನದಿ ಹರಿಯುತ್ತದೆ. ನದಿಯಲ್ಲಿ ನೀರಿನ ಮಟ್ಟ ಇಳಿಯುತ್ತಿದ್ದು ಕೆಲವೆಡೆ ಮರಳು ದೊರಕುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ರಾತ್ರಿ ವೇಳೆಯಲ್ಲಿ ಜೆಸಿಬಿ, ಪಿಕ್‌ಆಪ್ ಹಾಗೂ ಟಿಪ್ಪರ್‌ಗಳನ್ನು ಬಳಸಿಕೊಂಡು ಮರಳು ತೆಗೆಯುತ್ತಿದ್ದಾರೆ.

ಹರಿಹರಪುರ ಸಮೀಪದ ತೂಗುಸೇತುವೆ ಬಳಿ ತುಂಗೆಯ ಒಡಲಿಗೆ ಕನ್ನ ಹಾಕಿದ್ದು ತೂಗುಸೇತುವೆಗೆ ಅಪಾಯವಾಗುವ ರೀತಿಯಲ್ಲಿ ಮರಳನ್ನು ರಾತ್ರಿ ವೇಳೆಯಲ್ಲಿ ಹೊಳೆಯಿಂದ ತೆಗೆದಿದ್ದಾರೆ. ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಂತೆ ದಂಧೆಕೋರರು ಸ್ಥಳ ಬದಲಾವಣೆ ಮಾಡಿಕೊಂಡಿದ್ದು ಭಂಡಿಗಡಿ ಗ್ರಾಮದ ಹೊಳೆಹೊದ್ದು ಸಮೀಪದ ದೋಣಿಗಂಡಿಯಲ್ಲಿ ಎಗ್ಗಿಲ್ಲದೆ ಮರಳು ದೋಚುತ್ತಿದ್ದಾರೆ.

ವಾರದಲ್ಲಿ ಎರಡು ಬಾರಿ ದೋಣಿಗಂಡಿಯ ತುಂಗಾ ನದಿಗೆ ಇಳಿದು ಮರಳನ್ನು ತೆಗೆಯಲಾಗುತ್ತಿದೆ. ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆವರೆಗೆ ಜೆಸಿಬಿ ಮೂಲಕ ಹೊಳೆಯಲ್ಲಿ ಮರಳನ್ನು ಎತ್ತಿ ಪಿಕಪ್ ವಾಹನಕ್ಕೆ ತುಂಬಿ ಸಮೀಪದಲ್ಲೇ ಶೇಖರಣೆ ಮಾಡಲಾಗುತ್ತದೆ. ನಂತರ ಟಿಪ್ಪರ್ ಮೂಲಕ 5 ಗಂಟೆಯ ಒಳಗೆ ಬೇರೆಡೆಗೆ ಸಾಗಿಸಲಾಗುತ್ತಿದೆ. ಪೊಲೀಸರ ಶ್ರೀರಕ್ಷೆ ಇಲ್ಲದೆ ಮರಳು ಒಂದೆಡೆಯಿಂದ ಬೇರೆಡೆಗೆ ಸಾಗಿಸುವುದು ಕಷ್ಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net